ಕುಶಾಲನಗರ ಡಿ 28: ಕೊಡಗು ಜಿಲ್ಲೆಯಲ್ಲಿ 17ರ ವಯೋಮಿತಿಯ ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯು ಜನವರಿ 3 ರಿಂದ 8 ರ ವರೆಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೂಡಿಗೆ , ಪೊನ್ನಂಪೇಟೆ ಮತ್ತು ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ನಡೆಯಲ್ಲಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಕಲ ಸಿದ್ದತೆಗಳು ಕೂಡಿಗೆಯಲ್ಲಿ ನಡೆಯುತ್ತಿವೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ದೈಹಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಮತ್ತು ರಾಜ್ಯ ಶಿಕ್ಷಣ ಇಲಾಖೆಯ ಅಲ್ಪಸಂಖ್ಯಾತ, ಮತ್ತು ಇತರೆ ಭಾಷಾ ಸಂಬಂಧ ಅಯುಕ್ತರ ಕಛೇರಿಯ ಸಹ ನಿರ್ದೇಶಕ ರಘುವೀರ್, ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಆಟದ ಮೈದಾನ, ವಿದ್ಯಾರ್ಥಿನಿಯರು ತಂಗುವ ಕ್ರೀಡಾ ಶಾಲೆಯ ವಿದ್ಯಾರ್ಥಿಗಳ ವಸತಿ ಗೃಹ ಪರಿಶೀಲನೆ ಹಾಗೂ ರಾಷ್ಟ್ರೀಯ ಮಟ್ಟದ ತರಬೇತುದಾರರು ಮತ್ತು ತೀರ್ಪುಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಕ್ರೀಡಾಕೂಟ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ರಾಜ್ಯದ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿನಿಯ ಹಾಕಿ ಪಂದ್ಯಾವಳಿ ಉದ್ಘಾಟನೆಯು ಜನವರಿ 3 ರಂದು ಕೂಡಿಗೆ ಕ್ರೀಡಾ ಶಾಲೆಯ ಕ್ರೀಡಾ ಮೈದಾನದಲ್ಲಿ ನಡೆಯಲ್ಲಿದೆ.
ಈಗಾಗಲೇ ಕೂಡುಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ ಕೃಷಿ ಕ್ಷೇತ್ರದ ಕ್ರೀಡಾ ಶಾಲೆಗೆ ತೆರಳುವ ಮಾರ್ಗದ ಶುಚಿತ್ವ, ಅಭ್ಯಾಸ ಮೈದಾನದ ಶುಚಿತ್ವ ಸೇರಿದಂತೆ ವಿವಿಧ ಸ್ವಚ್ಚತಾ ಕಾರ್ಯಗಳು ಕ್ರೀಡಾ ಶಾಲೆಯ ಆವರಣ, ರಸ್ತೆಯ ಇಕ್ಕೆಲುಗಳಲ್ಲಿ ನಡೆಯುತ್ತಿವೆ.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಇಲಾಖೆಯ ಸಂಯೋಜಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯ ದೇವಕುಮಾರ್, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಪೂರ್ಣೇಶ್ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು ಹಾಜರಿದ್ದರು.
Back to top button
error: Content is protected !!