ಕುಶಾಲನಗರ, ಫೆ 11:
ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕುಶಾಲನಗರ ಸಮೀಪದ 7ನೇ ಹೊಸಕೋಟೆ ನಿವಾಸಿ ಶಿವದಾಸ್ ಎಂಬವರ ಪುತ್ರಿ ರಮ್ಯ (35) ಮೃತ ದುರ್ದೈವಿ.
ಕೇರಳದ ಕಣ್ಣೂರು ಜಿಲ್ಲೆಯ ಪಾನೂರು ಗ್ರಾಮದ ಮನೋಜ್ ಎಂಬವರನ್ನು ಮದುವೆಯಾಗಿದ್ದ ರಮ್ಯ 5 ವರ್ಷದ ಬಳಿಕ ಚೊಚ್ಚಲ ಹೆರಿಗೆಗೆ ತಾಯಿಯ ಮನೆಗೆ ಕಳೆದ 3 ತಿಂಗಳ ಹಿಂದೆ ಆಗಮಿಸಿದ್ದರು. ಪ್ರತಿ ತಿಂಗಳು ಕುಶಾಲನಗರದ ಖಾಸಗಿ ಆಸ್ಪತ್ರೆಯ ಮಹಿಳಾ ವೈದ್ಯರ ಬಳಿ ತಪಾಸಣೆ ನಡೆಸುತ್ತಿದ್ದರು. ಎಲ್ಲವೂ ನಾರ್ಮಲ್ ಇದೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ ವೈದ್ಯರು ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ಆಸ್ಪತ್ರೆಗೆ ತೆರಳಿದಾಗ ಮಗು ಹೊಟ್ಟೆಯಲ್ಲಿ ಮೃತಪಟ್ಟ ಬಗ್ಗೆ ತಿಳಿಸಿ ಪರಿಸ್ಥಿತಿ ಚಿಂತಾಜನಕವಾಗಿದ್ದು ಮೈಸೂರಿಗೆ ರವಾನಿಸಲು ಸೂಚಿಸಿದ್ದಾರೆ. ಅಲ್ಲಿಯೂ ಸಂಪೂರ್ಣ ಭರವಸೆ ನೀಡದ ವೈದ್ಯರು ಗರ್ಭಿಣಿಯನ್ನು ಪೋಷಕರ ಬಲವಂತದ ಮೇರೆಗೆ
ಸಿಸೇರಿಯನ್ ಮೂಲಕ ಹೊಟ್ಟೆಯಲ್ಲಿ ಮೃತಪಟ್ಟ ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಧ್ಯರಾತ್ರಿ ರಮ್ಯ ಮೃತಪಟ್ಟಿದ್ದಾರೆ.
ತಾಯಿ ಮತ್ತು ಮಗುವಿನ ಸಾವಿಗೆ ಕುಶಾಲನಗರ ಖಾಸಗಿ ಆಸ್ಪತ್ರೆಯ ಮಹಿಳಾ ವೈದ್ಯರೇ ಮುಖ್ಯ ಕಾರಣ ಎಂದು ಮೃತರ ದೊಡ್ಡಪ್ಪ ರಾಮಕೃಷ್ಣ,
ಸಂಬಂಧಿಕರಾದ ವಿಜಯ್ ಮತ್ತಿತರರು ಆರೋಪ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟನೆ: ಗರ್ಭಿಣಿ ಮಹಿಳೆ ರಮ್ಯ ಸಾವಿನ ಸಂಬಂಧ ಕುಶಾಲನಗರ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ.ಬಾಲಾಜಿ ಮತ್ತು ಡಾ.ಅನ್ನಪೂರ್ಣ ಅವರು ಸ್ಪಷ್ಟನೆ ನೀಡಿದ್ದು, ಇದೊಂದು ಅಪರೂಪದ ಪ್ರಕರಣ. ಗರ್ಭಚೀಲ ಒಡೆದು ರಕ್ತಸ್ರಾವವಾದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ. ಇದನ್ನು ಮುಂಚಿತವಾಗಿಯೇ ಗ್ರಹಿಸುವುದು ಸಾಧ್ಯವಿಲ್ಲ. ಸಿಸೇರಿಯನ್, ಗರ್ಭಪಾತ ನಡೆದ ಮಹಿಳೆಯರಲ್ಲಿ ಇಂತಹ ಪ್ರಕರಣಗಳು ಘಟಿಸುತ್ತವೆಯಾದರೂ ತೀರಾ ಅಪರೂಪ. ಈ ಮಹಿಳೆಗೆ ಮಾರ್ಚ್ ನಲ್ಲಿ ಪ್ರಸವ ದಿನಾಂಕ ನಿಗದಿಪಡಿಸಲಾಗಿತ್ತು. ರಕ್ತಸ್ರಾವದಿಂದ ನೋವು ಹೆಚ್ಚಾಗಿ ಡೆಲಿವೆರಿ ಪೇನ್ ಎಂದುಕೊಂಡು ಪೋಷಕರು ಕರೆತಂದಿದ್ದಾರೆ. ತರುವಾಗಲೇ ಗರ್ಭಿಣಿ ತೀವ್ರ ಅಸ್ವಸ್ಥರಾಗಿದ್ದ ಕಾರಣ ಸೂಕ್ತ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿತ್ತು. ಆ ಸಮಯದಲ್ಲಿ ಮಾಡಬೇಕಾದ ಎಲ್ಲಾ ಮುನ್ನೆಚ್ಚರಿಕೆ ಪ್ರಕ್ರಿಯೆ ಗಳನ್ನು ಕೈಗೊಳ್ಳಲಾಗಿತ್ತು. ತಾಯಿ ಮತ್ತು ಮಗುವಿನ ಮರಣದ ಬಗ್ಗೆ ಮರುಕವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Back to top button
error: Content is protected !!