ಕುಶಾಲನಗರ ಡಿ 24 : ಕುಶಾಲನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹೊಸ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೌದು, ಈ ಕರಾಟೆ ಶಾಲೆಯ ವಿದ್ಯಾರ್ಥಿನಿ ಇಂಪನಾ ಕರಾಟೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ತರಬೇತಿ ಸಂಸ್ಥೆಯಲ್ಲಿ ಕರಾಟೆ ಕಲಿಯಲು ಆರಂಭಿಸಿದ ಇಂಪನಾ, ಬಲು ಆಸಕ್ತಿಯಿಂದ ಕರಾಟೆಯ ಕೌಶಲ ಕರಗತ ಮಾಡಿಕೊಂಡರು. ಜಿಲ್ಲಾ ಮಟ್ಟದಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ತೋರಿ ರಾಜ್ಯಮಟ್ಟಕ್ಕೂ ಆಯ್ಕೆಯಾದರು. ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಮಣಿಸಿದ ಇಂಪನಾ, ಜಯದ ಸರಮಾಲೆ ಧರಿಸಿ ರಾಷ್ಟ್ರಮಟ್ಟಕ್ಕೆ ರಹದಾರಿ ಪಡೆದರು.
ನವ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಹಲವು ಸ್ಪರ್ಧಿಗಳು ಕಣದಲ್ಲಿದ್ದರು. ಗೆಲುವಿನ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದ ಇಂಪನಾ ಅದ್ಬುತ ಪ್ರದರ್ಶನ ತೋರಿ, ವಿವಿಧ ಪಟ್ಟುಗಳನ್ನು ಪ್ರಯೋಗಿಸಿ ಎದುರಾಳಿಯನ್ನು ಮಣಿಸಿದರು. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಪಟ್ಟುಕೊಂಡರು.
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಸ್ಪರ್ಧಿಸಿದ 14 ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕುಶಾಲನಗರದ ಇಂಪನಾ ಜಿಲ್ಲೆಯಲ್ಲಿಯೇ ಮೊದಲಿಗರಾಗಿದ್ದಾರೆ. ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಇಡೀ ಜಿಲ್ಲೆ ಮಾತ್ರವಲ್ಲ ರಾಜ್ಯಕ್ಕೂ ಹೆಮ್ಮೆ ತಂದಿದ್ದಾರೆ.
ಇಂಪಾನಾಳಾ ಈ ಸಾಧನೆಯಲ್ಲಿ ತರಬೇತುದಾರ ಸಂಕೇತ್ ಮಹತ್ವದ ಪಾತ್ರವಹಿಸುತ್ತಾರೆ. ಕರಾಟೆಯಲ್ಲಿ ಇಂಪನಾಳಾ ಆಸಕ್ತಿ ಕಂಡ ಸಂಕೇತ್ ಆಕೆಗೆ ತರಬೇತಿ ನೀಡಿ ಹುರಿದುಂಬಿಸಿದ್ದಾರೆ. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಗೆಲುವು ಪಡೆದ ಇಂಪನಾ ಊರಿಗೆ ಬರುತ್ತಿದ್ದಂತೆ ಕರಿಯಪ್ಪ ಬಡಾವಣೆಯ ನಿವಾಸಿಗಳು ಹಾಗೂ ಕರಿಯಪ್ಪ ಬಡಾವಣೆಯ ನಿವಾಸಿಗಳ ಟ್ರಸ್ಟ್ ವತಿಯಿಂದ ಆಕೆಯನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಒಟ್ಟಾರೆ ಇಂಪನಾ ಜಿಲ್ಲೆಗೆ ಕೀರ್ತಿ ತರುವುದರ ಜತೆಗೆ ಇತರರಿಗೂ ಸ್ಫೂರ್ತಿ ತುಂಬಿದ್ದಾಳೆ.
Back to top button
error: Content is protected !!