ಕ್ರೀಡೆ
ರಾಜ್ಯಮಟ್ಟದ ಹಾಕಿ: ಬೆಳಗಾವಿ, ಮೈಸೂರು ಪ್ರಥಮ, ಕಲುಬುರ್ಗಿ,ಕೂಡಿಗೆ ದ್ವಿತೀಯ
ಕುಶಾಲನಗರ, ಅ 10: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲದ ರಾಜ್ಯ ಮಟ್ಟದ ಬಾಲಕರು, ಮತ್ತು ಬಾಲಕಿಯರ ಪ್ರಾಥಮಿಕ, ಮತ್ತು ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾವಳಿಯು
ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲಾ ಹಾಕಿ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದು, ಮಂಗಳವಾರ ಕೂಡ ಹಾಕಿ ಟೂರ್ನಿ ನಡೆಯಿತು.
ರಾಜ್ಯ ಮಟ್ಟದ 14ರ ವಯೋಮಾನದ ಹಾಕಿ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ ಪ್ರಥಮ ಹಾಗೂ ಕಲ್ಬುರ್ಗಿ ತಂಡ ದ್ವಿತೀಯ ಸ್ಥಾನ ಗಳಿಸಿದವು. ಬೆಳಗಾವಿ ತಂಡವು 11 ಗೋಲು ಗಳಿಸಿ ವಿಜೇತಗೊಂಡು ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡಿದೆ. ಕಲ್ಬುರ್ಗಿ ತಂಡವು 10 ಗೋಲು ಗಳಿಸಿತು.
ರಾಜ್ಯ ಮಟ್ಟದ 17ರ ವಯೋಮಾನದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದ ತಂಡವು ಪ್ರಥಮ ಹಾಗೂ ಕೂಡಿಗೆ ಸರ್ಕಾರಿ ಕ್ರೀಡಾಶಾಲಾ ತಂಡವು ದ್ವಿತೀಯ ಸ್ಥಾನ ಗಳಿಸಿದವು.ಅಂತಿಮ ಟೂರ್ನಿಯಲ್ಲಿ ತೀವ್ರ ಸೆಣಸಾಟ ನಡೆಸಿದ ಉಭಯ ತಂಡಗಳು ಸಮಬಲ ಪ್ರದರ್ಶಿಸಿದವು. ಟೂರ್ನಿಯಲ್ಲಿ ಹೆಚ್ಚು ಗೋಲು ಗಳಿಸಿದ ಮೈಸೂರು ವಿಭಾಗದ ತಂಡವು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡಿತು. ಕೂಡಿಗೆ ಕ್ರೀಡಾಶಾಲಾ ತಂಡವು ದ್ವಿತೀಯ ಸ್ಥಾನ ಗಳಿಸಿತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂಥರ್ ಗೌಡ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡ ತಂಡಗಳಿಗೆ ಟ್ರೋಫಿ ವಿತರಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್ ಪಲ್ಲೇದ್, ಕ್ರೀಡಾಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ದೇವಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಟಿ.ಪೂರ್ಣೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಇತರರು ಇದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಇ.ನಂದ, ಸುರೇಶ್ ಕುಮಾರ್, ಡ್ಯಾನಿ ಈರಪ್ಪ, ಡ್ಯಾನಿ ನಾಣಯ್ಯ, ಗಣೇಶ್ ಕುಮಾರ್, ತಮ್ಮಯ್ಯ, ರಮಾನಂದ, ಅರುಣ್ ಕುಮಾರ್ , ಬೋಪಣ್ಣ ಕಕ್ಕಬ್ಬೆ, ರತೀಶ್, ಮಹೇಂದ್ರ, ಬೋಪಣ್ಣ ಶೆಟ್ಟಿಗೇರಿ ಇತರರು ರೆಫರಿಯಾಗಿ ಕಾರ್ಯ ನಿರ್ವಹಿಸಿದರು. ವಿಜೇತ ತಂಡಗಳು ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಯಲ್ಲಿ ಭಾಗವಹಿಸಲಿವೆ. ಟೂರ್ನಿಯಲ್ಲಿ ನಾಲ್ಕುವಿಭಾಗಗಳಾದ ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗಗಳ ತಂಡಗಳು ಪಾಲ್ಗೊಂಡಿದ್ದವು