ಕಾಮಗಾರಿ

ಕುಶಾಲನಗರದಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟಿನ್, ಶಾಸಕ‌ರ ಕಚೇರಿ ಪ್ರಾರಂಭ

ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಪರಿಶೀಲಿಸಿದ ಶಾಸಕ ಡಾ.ಮಂಥರ್ ಗೌಡ

ಕುಶಾಲನಗರ, ಅ 10: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದ ಪ್ರಾಂಗಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯುವ ಹಿನ್ನಲೆಯಲ್ಲಿ ಶಾಸಕ‌ ಮಂಥರ್ ಗೌಡ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ಕಾರ್ಯ ನಡೆಯಿತು.
ಸಾರಿಗೆ ಬಸ್ ನಿಲ್ದಾಣಕ್ಕೆ ಧಾವಿಸಿದ ಶಾಸಕರು ಸಾರಿಗೆ ನಿಲ್ದಾಣದ ಪರಿಸರ ವೀಕ್ಷಿಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಲಾ ಕಾಲೇಜು‌ ವಿದ್ಯಾರ್ಥಿಗಳು, ಪ್ರಯಾಣಿಕರ ಬಳಿ ಅನಾನುಕೂಲತೆಗಳ ಬಗ್ಗೆ ಪ್ರಶ್ನಿಸಿದರು.
ನಿಲ್ದಾಣದ ಆವರಣದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದರು.
ಸಾರಿಗೆ ಬಸ್ ನಿಲ್ದಾಣ ಪ್ರಾಂಗಣದಲ್ಲಿ ಸ್ವಚ್ಚತೆ ಹಾಗೂ ಇರುವ ಸ್ಥಳಾವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಂಚಾರಿ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಶಾಲನಗರದಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟಿನ್ ಸ್ಥಾಪನೆ ಆಗಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿ ಕ್ಯಾಂಟಿನ್ ತೆರೆಯಲಾಗುವುದು.
ಕುಶಾಲನಗರದ ಮುಳ್ಳುಸೋಗೆಯಲ್ಲಿ ಶಾಸಕರ ಕಛೇರಿ ತೆರೆಯಲಾಗುವುದು. ಕುಶಾಲನಗರ ಸಾರಿಗೆ ಡಿಪೋ ಆರಂಭಿಸಲು ಹಿಂದಿನ ಸರಕಾರ ಅನುಮೋದನೆ ನೀಡಿತ್ತು, ಇದೀಗ ನಮ್ಮ‌ ಸರಕಾರ ಅನುದಾನ ಕಲ್ಪಿಸಿದ್ದು ಟೆಂಡರ್ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರವಾಗಿ ಡಿಪೋ ಸ್ಥಾಪಿಸುವ ಕಾಮಗಾರಿ ಚಾಲನೆಗೊಳ್ಳಲಿದೆ. ತಾಲೂಕಿಗೊಂದು ಡಿಪೋ ಸ್ಥಾಪನೆ ಕಷ್ಟಸಾಧ್ಯವಾಗಿದ್ದು ಸೋಮವಾರಪೇಟೆ ಸಾರಿಗೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲು ಕ್ರಮವಹಿಸಲಾಗುವುದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಯಾರಿಗೇ ದೊರೆತರೂ ಕೂಡ ಕಾಂಗ್ರೆಸ್ ಹೆಚ್ಚಿನ‌ ಮತಗಳಿಂದ ಗೆಲುವು ಸಾಧಿಸಲಿದೆ ಎಂದರು.
ಬಳಿಕ ಮುಳ್ಳುಸೋಗೆಯಲ್ಲಿರುವ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯರಾದ ಶೇಖ್ ಖಲೀಮುಲ್ಲಾ, ಎಂ.ಕೆ.ದಿನೇಶ್, ವಿ.ಎಸ್.ಆನಂದಕುಮಾರ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಅಭಿಯಂತರ ರಂಗರಾಮ್, ಪ್ರಮುಖರಾದ ಶಿವಶಂಕರ್, ಕಿರಣ್, ಪ್ರಕಾಶ್‌, ನವೀನ್, ಚಂದ್ರು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!