ಕುಶಾಲನಗರ, ಸೆ 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಕೂಡಿಗೆಯ ಸರಕಾರಿ ಕ್ರೀಡಾ ಶಾಲೆಯ ಮೈದಾನದಲ್ಲಿ ಅರಂಭಗೊಂಡಿತು.
ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸೋಲು ಗೆಲುವು ಲೆಕ್ಕಿಸದೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಹಾಕಿ ಅಸೋಸಿಯೇಷನ್ ನ ಉಪಾಧ್ಯಕ್ಷ ಪಳಂಗಡ ಲವಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯವಶ್ಯಕ. ಜೊತೆಗೆ ಶಿಸ್ತು ಪಾಲನೆ ಕೂಡ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ ಎಂದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮಾತನಾಡಿ, ಈ ಬಾರಿ ಕೊಡಗು ಜಿಲ್ಲೆಯಲ್ಲಿ ದಸರಾ ವಿಭಾಗದ ಮಟ್ಟದ ಕ್ರೀಡಾ ಕೂಟ ಹಮ್ಮಿಕೊಳ್ಳಲು ಅವಕಾಶವನ್ನು ಇಲಾಖೆ ನೀಡಿದೆ. ಅದರ ಮೂಲಕ ಮೈಸೂರು ವಿಭಾಗ ಮಟ್ಟದ ನಾಲ್ಕು ಜಿಲ್ಲೆಯ ಪುರುಷರ ಮತ್ತು ಮಹಿಳಾ ತಂಡಗಳು ಭಾಗವಹಿಸಿವೆ ಎಂದರು.ಇದೇ ಸಂದರ್ಭ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ರೀಡಾ ಶಾಲೆ ಆಡಳಿತ ಅಧಿಕಾರಿ ಜಯರಾಮ, ಶಾಲಾ ಮುಖ್ಯೋಪಾಧ್ಯಾಯ ದೇವಕುಮಾರ್, ಕೊಡಗು ಹಾಕಿ ಅಸೋಸಿಯೇಷನ್ ಕಾರ್ಯದರ್ಶಿ ಚಂಗಪ್ಪ, ಕೂಡಿಗೆ ಪದವಿ ಪೂರ್ವ ಕಾಲೇಜು ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ನಿವೃತ್ತ ವಾಲಿಬಾಲ್ ತರಬೇತುದಾರ ಸುರೇಶ್ ಸೇರಿದಂತೆ ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜ, ಹಾಕಿ ತರಬೇತುದಾರ ವೆಂಕಟೇಶ್, ದಿನಮಣಿ, ಬಿ. ಸಿ ಮಂಜುನಾಥ್, ಸುರೇಶ್, ಮಹಾಬಲ ಸೇರಿದಂತೆ ಹಾಕಿ ಮತ್ತು ಜಿಮ್ನಾಸ್ಟಿಕ್ಸ್ ನ ತರಬೇತಿದಾರರು ಸೇರಿದಂತೆ ವಿವಿಧ ಜಿಲ್ಲೆಯ ಕ್ರೀಡಾ ಪಟುಗಳು ಭಾಗವಹಿಸಿದರು.
ಕ್ರೀಡಾ ಶಾಲೆಯ ಒಳ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ ರಾಜ್ಯ ಮಟ್ಟದ ಅಯ್ಕೆ ಪ್ರಕ್ರಿಯೆಯು ನಡೆಯಿತು.
ವಿಭಾಗ ಮಟ್ಟದ ಮಹಿಳೆಯರ ಹಾಕಿ ಪಂದ್ಯದಲ್ಲಿ ಮೈಸೂರು ತಂಡವು ಪ್ರಥಮ, ಕೊಡಗು ತಂಡವು ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ, ಹಾಸನ ತಂಡ ದ್ವಿತೀಯ ಸ್ಥಾನ ಪಡೆಯಿತು.
ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ಗಳನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿ.ಎಸ್. ಗುರುಸ್ವಾಮಿ ವಿತರಣೆ ಮಾಡಿದರು.
Back to top button
error: Content is protected !!