ಆರೋಪ
ಕುಶಾಲನಗರದಲ್ಲಿ ಶಾಸಕರಂತೆ ವರ್ತಿಸುತ್ತಿದ್ದಾರೆ ಬ್ಲಾಕ್ ಅಧ್ಯಕ್ಷರು: ಬಿಜೆಪಿ ಮುಖಂಡರ ಆರೋಪ
ಕುಶಾಲನಗರ, ನ.28:
ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಸೇತುವೆಗಳು ಸರಕಾರಿ ಕಟ್ಟಡಗಳ ಕಾಮಗಾರಿಗಳನ್ನು ನಡೆಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ ನಿಧಿ ಅಡಿ ಕೊಡಗು ಜಿಲ್ಲೆಗೆ ನೀಡಿದ ಅನುದಾನಗಳನ್ನು ಬೇರೆ ಕಾಮಗಾರಿಗಳಿಗೆ ಬದಲಾವಣೆ ಮಾಡಿದ ಸರಕಾರದ ನಿಲುವನ್ನು ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರುಖಂಡಿಸಿದ್ದಾರೆ.
ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ ಕೆ ಲೋಕೇಶ್ ಮಾಜಿ ಶಾಸಕರ ಅವಧಿಯಲ್ಲಿ ಏಳು ಕೋಟಿ ರೂ ಅನುದಾನದಲ್ಲಿ ಅನುಷ್ಠಾನಗೊಳ್ಳಬೇಕಾಗಿದ್ದ ಕಾಮಗಾರಿಗಳನ್ನು ನೂತನ ಶಾಸಕರು ಬದಲಾಯಿಸಿರುವುದು ಸರಿಯಲ್ಲ. ನೂತನ ಸರ್ಕಾರದಿಂದ ಜಿಲ್ಲೆಗೆ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದ ಲೋಕೇಶ್, ಪ್ರಸಕ್ತ ಶಾಸಕರುಗಳ ಅವಧಿಯಲ್ಲಿ ಯಾವುದೇ ರೀತಿಯ ಹೆಚ್ಚುವರಿ ಅನುದಾನ ತರುವಲ್ಲಿ ಶಾಸಕ ಮಂತರ್ ಗೌಡ ವಿಫಲರಾಗಿದ್ದಾರೆ. ಕುಶಾಲನಗರ ವ್ಯಾಪ್ತಿಯಲ್ಲಿ ಶಾಸಕರ ಕೆಲಸಗಳನ್ನು ಕೆಲವರು ಗುತ್ತಿಗೆ ತೆಗೆದುಕೊಂಡಿದ್ದು ಶಾಸಕರು ಯಾರು ಎನ್ನುವ ಪ್ರಶ್ನೆ ಸಾಮಾನ್ಯ ನಾಗರಿಕರಲ್ಲಿ ಸೃಷ್ಟಿಯಾಗಿದೆ ಎಂದು ಹೇಳಿದ ಲೋಕೇಶ್ ಶಾಸಕರ ಹೆಸರಿನಲ್ಲಿ ಎಲ್ಲಾ ಕೆಲಸಗಳಿಗೆ ಮೂಗು ತೂರಿಸುವುದು ಕಂಡು ಬಂದಿದೆ ಎಂದು ಆರೋಪ ವ್ಯಕ್ತಪಡಿಸಿದರು.
ಶಾಸಕರು ಅಧಿಕಾರಿಗಳ ನಿಯಂತ್ರಣ ಕಳೆದುಕೊಂಡಿದ್ದಾರೆ. ಕೇವಲ ಭಾಷಣಕ್ಕೆ ಸೀಮಿತರಾಗಿದ್ದಾರೆ ಎಂದ ಲೋಕೇಶ್ ಸಿದ್ದಾಪುರ ಮತ್ತು ಕಾವೇರಿ ತಟದ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಈ ಸಂದರ್ಭ ಮಾತನಾಡಿದ ಮಂಡಲ ಉಪಾಧ್ಯಕ್ಷರಾದ ಕೆ ವರದ ಸ್ಥಳೀಯ ಕೆಲವು ಕಾಂಗ್ರೆಸ್ ನಾಯಕರು ಮಾಜಿ ಶಾಸಕರ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿರುವುದು ಖಂಡನೀಯ. 25 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ ಮಾಜಿ ಶಾಸಕರು ಕ್ಷೇತ್ರದಲ್ಲಿ ಪ್ರವಾಹ, ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಮಾಹಿತಿಯ ಕೊರತೆ ಎದುರಿಸುತ್ತಿದ್ದಾರೆ. ಸಭ್ಯತೆ ಮೀರಿ ಮಾತನಾಡುವುದು ಸಮಂಜಸವಲ್ಲ ಅನಗತ್ಯವಾಗಿ ಹೇಳಿಕೆ ಹೇಳುವುದನ್ನು ನಿಲ್ಲಿಸಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಮೃತ್ ರಾಜ್ ಮಾತನಾಡಿ ಜನರನ್ನು ಸೋಮಾರಿ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯ ಯೋಜನೆಗಳನ್ನು ರೂಪಿಸುತ್ತಿದೆ, ಸಮಾಜಕ್ಕೆ ಸುಳ್ಳು ಮಾಹಿತಿಯನ್ನು ಒದಗಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ಸೇಡಿನ ರಾಜಕಾರಣ ಸಲ್ಲದು. ಇದೇ ರೀತಿ ಮುಂದುವರಿದಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಕುಶಾಲನಗರದಲ್ಲಿ ಕಳ್ಳರಿಗೆ, ಅಪರಾಧ ಲೋಕದ ಜನರಿಗೆ ಪೊಲೀಸ್ ಇಲಾಖೆಯ ಭಯ ಇಲ್ಲದಂತೆ ಕಾಣುತ್ತಿದೆ. ಕುಶಾಲನಗರದಲ್ಲಿ ಆಗಾಗೆ ಅಪರಾಧಗಳು ಮರುಕಳಿಸುತ್ತಿವೆ. ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಆಡಳಿತ ಯಂತ್ರ ಕುಸಿದಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮಂಡಲ ಅಧ್ಯಕ್ಷರಾದ ಎಂ ಎನ್ ಕುಮಾರಪ್ಪ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ವೈಶಾಖ, ಶಕ್ತಿ ಕೇಂದ್ರದ ಪ್ರಮುಖರಾದ ಕೆ ಪ್ರವೀಣ್ ಇದ್ದರು.