ಕುಶಾಲನಗರ, ಫೆ 03: ನಾಮಫಲಕ, ಜಾಹಿರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವ ರಾಜ್ಯ ಸರಕಾರದ ಆದೇಶವಿದ್ದರೂ ಕೂಡ ಸ್ಥಳೀಯ ಆಡಳಿತಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕುಶಾಲನಗರದ ಸಾಗರ್ ಹೋಟೆಲ್ ಕಟ್ಟಡ ಮೇಲ್ಭಾಗದಲ್ಲಿ ಬೃಹತ್ ಆಕಾರದಲ್ಲಿ ಜೊಮೆಟೋ ಜಾಹಿರಾತು ಫಲಕ ಅಳವಡಿಸಿದ್ದ ಅದರಲ್ಲಿ ನಿರ್ದಿಷ್ಟ ಪ್ರಮಾಣದ ಕನ್ನಡ ಭಾಷೆ ಬಳಕೆ ಮಾಡಿಲ್ಲ. ಬಹುತೇಕ ಆಂಗ್ಲಮಯವಾಗಿದೆ. ಇದನ್ನು ಪರಿಶೀಲನೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪುರಸಭೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ನಂತರ ಉಳಿದ ಭಾಷೆಗಳು. ಶೇ. 60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಸಬೇಕಿದೆ. ಲೈಸೆನ್ಸ್ ನೀಡುವ ಸಂದರ್ಭ ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಂತರ ಕನ್ನಡ ಅನುಷ್ಠಾನ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಕೂಡಲೆ ಇಲ್ಲಿನ ನಾಮಫಲಕ ತೆರವುಗೊಳಿಸಿ, ಕನ್ನಡ ಭಾಷೆಗೆ ಆದ್ಯತೆ ನೀಡಿದ ಫಲಕ ಅಳವಡಿಸಬೇಕಿದೆ. ಬದಲಾವಣೆ ಮಾಡಲು ಕೋರಿ ಪುರಸಭೆ ಅಧಿಕಾರಿಗಳು, ಕಟ್ಟಡದ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದು ಪುನರಾವರ್ತನೆ ಆದಲ್ಲಿ ಸಂಘಟನೆ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರವೇ ನಗರಾಧ್ಯಕ್ಷ ಎಂ.ಎಸ್.ಮಣಿಕಂಠ ಮಾತನಾಡಿ, ಇಲ್ಲಿರುವ ನಾಮಫಲಕದಲ್ಲಿ ಶೇ 10 ರಷ್ಟು ಕೂಡ ಕನ್ನಡ ಬಳಕೆಯಾಗಿಲ್ಲ. ಯಾವ ಆಧಾರದಲ್ಲಿ ಪುರಸಭೆಯಿಂದ ಅನುಮತಿ ನೀಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಅನುಮತಿ ನೀಡುವ ಸಂದರ್ಭ ಸರಕಾರದ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಜೊತೆಯಲ್ಲಿ ಕನ್ನಡ ಬಳಕೆ ಬಗ್ಗೆ ಕೂಡ ನಿಗಾ ವಹಿಸಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭ ಕರವೇ ಜಿಲ್ಲಾ ಕಾರ್ಯದರ್ಶಿ ನಾಗರಾಜು, ತಾಲ್ಲೂಕು ಸಂಚಾಲಕ ರಂಗಸ್ವಾಮಿ, ನಗರ ಉಪಾಧ್ಯಕ್ಷ ಮಣಿಕಂಠ.ಆರ್, ಪ್ರಮುಖರಾದ ಕಾರ್ತಿಕ್, ಪುಟ್ಟಸ್ವಾಮಿ.ಎಸ್.ಎನ್, ಭರತ್, ನಿರ್ಮಲ,ವಿ.ಹೆಚ್.ಪುಟ್ಟಮ್ಮ ಮತ್ತಿತರರು ಹಾಜರಿದ್ದರು.
Back to top button
error: Content is protected !!