ಕುಶಾಲನಗರ, ನ 29: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವರ್ಷವಿಡೀ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳು ಒಂದಷ್ಟು ಮನರಂಜನೆ ಹಾಗೂ ವಿಶ್ರಾಂತಿ ಒದಗಿಸಲಿದೆ. ಪರೀಕ್ಷೆಗೂ ಮುನ್ನ ಇಂತಹ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡಲಿದೆ. ಮಾತ್ರವಲ್ಲದೆ ತಮ್ಮಲ್ಲಿರುವ ಪಠ್ಯೇತರ ಚಟುವಟಿಕೆಗಳು, ಕಲೆ, ಸಂಸ್ಕೃತಿ, ಪ್ರತಿಭೆಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯಾಗಿದೆ. ಯಾವುದೇ ಅಂಜಿಕೆ, ಅಳುಕಿಲ್ಲದೆ ತಮ್ಮ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಳ್ಳಲು ಅವರು ಸಲಹೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಬಿಂಬಿಸುವ ಉಡುಗೆಯಲ್ಲಿ ಆಗಮಿಸಿರುವುದನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಭಾರತಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಿ.ಜೈವರ್ಧನ್ ಮಾತನಾಡಿ, ಸಂಸ್ಕೃತಿ ಉಳಿದಾಗ ಮಾತ್ರ ನಾಡಿನ ಹಿರಿಮೆ ವೃದ್ದಿಸಲು ಸಾಧ್ಯ. ಯುವ ಪೀಳಿಗೆ ದೇಶದ ಸಂಸ್ಕೃತಿಯ ರಾಯಭಾರಿಗಳು. ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೂಲಕ ಕಾಲೇಜು, ಪೋಷಕರಿಗೆ ಹಿರಿಮೆ ತರುವುದರೊಂದಿಗೆ ಇತರರಿಗೆ ಮಾದತಿಯಾಗಬೇಕು ಎಂದು ಕರೆ ನೀಡಿದರು.
ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ನಾಗೇಂದ್ರಸ್ವಾಮಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು. ಇದೇ ಸಂದರ್ಭ ಕೆಬಿಯಾನ ಕಾರ್ಯಕ್ರಮದ ಬೃಹತ್ ಪೋಸ್ಟರ್ ಬಿಡುಗಡೆ, ವಿದ್ಯಾರ್ಥಿಗಳಿಂದ ರಾಂಪ್ ವಾಕ್ ನಡೆಯಿತು.
ಈ ಸಂದರ್ಭ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
Back to top button
error: Content is protected !!