ಅರಣ್ಯ ವನ್ಯಜೀವಿ
ಹುದುಗೂರಿನಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟುವ ಮಾಹಿತಿ ಕಾರ್ಯಗಾರ
ಕುಶಾಲನಗರ, ಅ 19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳು ಜಮೀನಿಗೆ ದಾಳಿ ಮಾಡುವುದನ್ನು ತಡೆಗಟ್ಟಲು ಅನುಸರಿಸಬಹುದಾದ ಕ್ರಮಗಳ ಕುರಿತು ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಅರಣ್ಯ ಇಲಾಖೆಯ ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಆದಿತ್ಯ ರುದ್ರ ಅವರು ಹುದುಗೂರು ಗ್ರಾಮದ ಕ್ರೀಡಾಂಗಣದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ಅವರು, ಕಾಡಾನೆಗಳು ದಿನಂಪ್ರತಿ ಜಮೀನಿಗೆ ದಾಳಿ ಮಾಡುವ ದಾರಿಯಲ್ಲಿ ಒಂದು ಚೀಲದಲ್ಲಿ ಸ್ವಲ್ಪ ಒಣಹುಲ್ಲು, ಖಾರ ಮೆಣಸಿನ ಪುಡಿಯನ್ನು ಬಳಸಿ ಹೊಗೆಯನ್ನು, ಗಾಳಿಯಲ್ಲಿ ಹರಡುವ ಮೂಲಕ ಕಾಡಾನೆಗಳು ಜಮೀನಿಗೆ ಬರುವುದು ತಟೆಗಟ್ಟಬಹುದು. ಆನೆಗೆ ಮದ ಬರುವ ಬಗ್ಗೆ ಮತ್ತು ಕಾಡಾನೆಗಳು ಮನುಷ್ಯನ ಬೆವರಿನ ವಾಸನೆಯನ್ನು ಗೃಹಿಸುವ ಶಕ್ತಿ ಬಗ್ಗೆ, ಆನೆಗಳು ಅಹಾರ ದೊರೆತ ಸ್ಧಳದಿಂದ ಬೇರೆ ಆನೆಗಳಿಗೆ ಅಹಾರ ಸಂಗ್ರಹದ ಮಾಹಿತಿಯನ್ನು ರವಾನಿಸುವ ಶಕ್ತಿ ಇರುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಮಾಮಹೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಮುತ್ತಪ್ಪ, ಯುವಕ ಸಂಘದ ಅಧ್ಯಕ್ಷ ಶರತ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎಸ್. ರವಿ, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ವರ್ಗ, ಸೇರಿದಂತೆ ಹುದುಗೂರು, ಬ್ಯಾಡಗೊಟ್ಟ ಗ್ರಾಮದ ನೂರಾರು ಗ್ರಾಮಸ್ಥರು, ಯುವಕ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖ್ಯಸ್ಥರು ಹಾಜರಿದ್ದರು.