ಶಿಕ್ಷಣ

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಎನ್.ಎಸ್.ಎಸ್. ಶಿಬಿರಗಳು ಸಹಕಾರಿ

ಕನ್ನಡ ಭಾರತಿ ಪಿಯು ಕಾಲೇಜಿನ ವಾರ್ಷಿಕ ಶಿಬಿರದಲ್ಲಿ ನಂಜುಂಡಸ್ವಾಮಿ ಆಶಯ

ಕುಶಾಲನಗರ, ಅ 19: ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ರಾಷ್ಡ್ರೀಯ ಸೇವಾ ಯೋಜನಾ ಶಿಬಿರಗಳು ಅತ್ಯುತ್ತಮ ವೇದಿಕೆ ಎಂದು ಉಪನ್ಯಾಸಕರೂ ಆದ ವಾಗ್ಮಿ ಎಂ.ನಂಜುಂಡಸ್ವಾಮಿ ಹೇಳಿದರು.
ಕುಶಾಲನಗರದ ಕನ್ನಡ ಭಾರತಿ ವಿದ್ಯಾಸಂಸ್ಥೆ ವತಿಯಿಂದ ಪಿರಿಯಾಪಟ್ಟಣ ತಾಲ್ಲೂಕಿನ ಹುಣಸವಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡು ” ಸ್ವಚ್ಛ ಭಾರತ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ” ವಿಚಾರದ ಕುರಿತು ಉಪನ್ಯಾಸ ನೀಡಿದ ಅವರು, ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನಾಂಗ ಗುರು ಹಿರಿಯರನ್ನು ಗೌರವಿಸುವ, ಹೆತ್ತವರನ್ನು ಆಧರಿಸುವ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇಂದು ಅನಿವಾರ್ಯವಿದೆ.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಲುಷಿತ ಮನಸ್ಥಿತಿಯುಳ್ಳವರಿಂದ ಸಮಾಜದಲ್ಲಿ ಆಗುತ್ತಿರುವ ವಿವಿಧ ರೀತಿಯ ಹಾನಿಯನ್ನು ತಪ್ಪಿಸಲು ಜಾಗೃತ ಮನಸ್ಥಿತಿಯ ಸತ್ಪ್ರಜೆಗಳ ಅಗತ್ಯ ಇಂದು ಅನಿವಾರ್ಯವಿದೆ ಎಂದು ಹೇಳಿದ ನಂಜುಂಡಸ್ವಾಮಿ,
ಗ್ರಾಮೀಣ ಪ್ರದೇಶಗಳ ಜನರ ಬದುಕು – ಬವಣೆಗಳನ್ನು ಅರಿತು ಅವುಗಳ ನಿವಾರಣೆಗೆ ಯೋಜನೆಗಳನ್ನು ರೂಪಿಸುವ ಜವಬ್ದಾರಿ ಇಂತಹ ಶಿಬಿರಗಳ ಜವಬ್ದಾರಿಯಾಗಿದೆ.
ಭವಿಷ್ಯದ ಭಾರತದ ನಿರ್ಮಾತೃಗಳಾದ ಇಂದಿನ ವಿದ್ಯಾರ್ಥಿಗಳಲ್ಲಿ ಉತ್ತಮವಾದ ಸಚ್ಚಾರಿತ್ರ್ಯ ಹಾಗೂ ಸಹಬಾಳ್ವೆಯ ಜೀವನದ ನೀತಿ ಪಾಠಗಳನ್ನು ಶಿಬಿರಗಳಲ್ಲಿ ಕಲಿಯಲು ಸಾಧ್ಯ ಎಂದು ಅವರು ಹೇಳಿದರು.
ಬಳಿಕ ಶಿಬಿರದ ಶಿಬಿರಾರ್ಥಿಗಳೊಂದಿಗೆ ಭಾವಗೀತೆ ಹಾಗೂ ಜನಪದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.
ಕನ್ನಡ ಭಾರತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯೂ ಆದ ಪುರಸಭಾ ಅಧ್ಯಕ್ಷ ಜಯವರ್ಧನ ಮಾತನಾಡಿ ವಿದ್ಯಾರ್ಥಿಗಳು ಎನ್ ಎಸ್ ಎಸ್ ಗೀತೆಯಲ್ಲಿನ ಸಾರವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದದ್ದೇ ಆದಲ್ಲಿ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಾಕಾರಗೊಳ್ಳಲಿದೆ ಎಂದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಮನುಷ್ಯರಿಗೆ ಉದಾರವಾಗಿ ಎಲ್ಲವನ್ನೂ ಕೊಟ್ಟಿರುವ ಪ್ರಕೃತಿಯ ಋಣ ತೀರಿಸಬೇಕೆಂದರೆ ನೆಲ, ಜಲ, ಪರಿಸರವನ್ನು ಪ್ರೀತಿಸಿ ಗೌರವಿಸಬೇಕು. ಆರಾಧಿಸಬೇಕೆಂದು ಕರೆಕೊಟ್ಟರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ದಿವ್ಯಾ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ ಹೋರಾಟಗಾರ ಕುಂದನಹಳ್ಳಿಯ ಶಿವಣ್ಣ,
ಶಿಬಿರಾಧಿಕಾರಿ ಸಿ.ಮಂಜುನಾಥ್, ಸಹಶಿಬಿರಾಧಿಕಾರಿ ಡಾ.ನಾಗೇಂದ್ರಸ್ವಾಮಿ, ಉಪನ್ಯಾಸಕರಾದ ರಶ್ಮಿ, ಸುನಿಲ್ ಇದ್ದರು.
ಶಿಬಿರಾರ್ಥಿ ಮಣಿ ನಿರೂಪಿಸಿದರು. ಮಂಗಳ ಸ್ವಾಗತಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!