ಕುಶಾಲನಗರ, ಅ 09: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನ ನಂಜರಾಯಪಟ್ಟಣ ಶಾಖೆ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಮತ್ತು ಓಣಂ ಆಚರಣೆ ನಡೆಯಿತು.
ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಂಥರ್ ಗೌಡ ಪಾಲ್ಗೊಂಡಿದ್ದರು.
ಬೆಳಗ್ಗೆ ಮುತ್ತಪ್ಪ ದೇವಾಲಯದಲ್ಲಿ ಪಯಂಗುತ್ತಿ ಪೂಜೆ ಬಳಿಕ ಪೊನ್ನುಮುತ್ತಪ್ಪ ಕಲಾಸಮಿತಿಯ ಚಂಡೆಮೇಳದೊಂದಿಗೆ ಬಲಿ ಚಕ್ರವರ್ತಿ ವೇಷಧಾರಿ ಸಮ್ಮುಖದಲ್ಲಿ ಸಮಾಜ ಬಾಂಧವರು ಮೆರವಣಿಗೆ ನಡೆಸಿದರು.
ಗುರುಪೂಜೆ ಬಳಿಕ ಗ್ರಾಮದ ಮೈದಾನದಲ್ಲಿ ವಿವಿಧ ಕ್ರೀಡಾಕೂಟಗಳು ನಡೆದವು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಎಸ್.ಎನ್.ಡಿ.ಪಿ ಅಧ್ಯಕ್ಷ ಟಿ.ಟಿ.ನವೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಲಯಾಳ ಸಮಾಜಗಳ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷ ವಿ.ಎಂ.ವಿಜಯನ್, ಎಸ್.ಎನ್.ಡಿ.ಪಿ.ಯೋಗಂ ಕೊಡಗು ಘಟಕದ ಅಧ್ಯಕ್ಷ ವಿ.ಕೆ.ಲೋಕೇಶ್, ಕಾಫಿ ಬೆಳೆಗಾರರಾದ ಟಿ.ಕೆ.ಸೋಮನ್, ಟಿ.ಕೆ.ರಘು, ಪ್ರಮುಖರಾದ ಸಚಿನ್, ಟಿ.ಕೆ.ಸುಮೇಶ್ ಸೇರಿದಂತೆ ಸ್ಥಳೀಯ ಮುಖಂಡರುಗಳು, ಗ್ರಾಮಸ್ಥರು ಇದ್ದರು.
ಇದೇ ಸಂದರ್ಭ ಸಾಮೂಹಿಕ ಓಣಂ ಸಧ್ಯ ಭೋಜನ ಏರ್ಪಡಿಸಲಾಗಿತ್ತು. ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.