ಕುಶಾಲನಗರ, ಜ 27: ಕಳೆದ 5 ದಶಕಗಳಿಂದಲೂ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆ ಭಾಗದಲ್ಲಿ ನೆಲೆಕಂಡಿರುವ ಹಲವು ಕುಟುಂಬಗಳು ಹಕ್ಕುಪತ್ರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಸೌಲಭ್ಯ ವಂಚಿತ ನಿವಾಸಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸುವ ಬಗ್ಗೆ ಹಕ್ಕುಪತ್ರ ವಂಚಿತರು ಎಚ್ಚರಿಕೆ ನೀಡಿದ್ದಾರೆ. ನಿವೇಶನ ಹೊಂದಿರುವವರು ಮನೆ ನಿರ್ಮಿಸಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ, ರಸ್ತೆ, ಚರಂಡಿ, ಬೀದಿ ದೀಪ ವ್ಯವಸ್ಥೆ ಇಲ್ಲದೆ ಈಗಿರುವ ನಿವಾಸಿಗಳು ಸಂಕಷ್ಟ ಅನುಭವಿಸುತ್ತದ್ದೇವೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು ನೇತೃತ್ವದಲ್ಲಿ ನಿವಾಸಿಗಳನ್ನು ಸಂಘಟಿಸಿ ಮುಂದಿನ ಹೋರಾಟದ ಕುರಿತು ಗ್ರಾಮದಲ್ಲಿ ಸಿದ್ದತೆ ನಡೆಸಲಾಯಿತು.
ಈ ಸಂದರ್ಭ ಅಳಲು ತೋಡಿಕೊಂಡ ಮಹಿಳೆಯರು, ಚುನಾವಣೆ ಸಂದರ್ಭ ಮಾತ್ರ ಆಶ್ವಾಸನೆ ನೀಡುವವರು ನಂತರದ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಮೂಲಸೌಕರ್ಯಗಳಿಂದ ವಂಚಿತರಾಗಿ, ಅರಣ್ಯ ಇಲಾಖೆಯವರ ಭಯದಲ್ಲಿ ಬದುಕು ಸಾಗಿಸುವ ಸ್ಥಿತಿ ಎದುರಾಗಿದೆ ಎಂದು ತಮ್ಮ ಬವಣೆ ತೋಡಿಕೊಂಡರು. ಗ್ರಾಮಪಂಚಾಯ್ತಿಯಿಂದ ನಮಗೆ ಹಕ್ಕುಪತ್ರ ದೊರೆಯುವ ಯಾವುದೇ ಭರವಸೆ ಇಲ್ಲ ಎಂದು ಮಂಜುಳಾ, ಮಹದೇವಮ್ಮ, ಮುತ್ತುಲಕ್ಷ್ಮಿ, ದೇವಿಕಾ, ಭಾರತಿ, ಮಂಜುಕುಟ್ಟಿ, ಭಾಗ್ಯರಾಜು, ವಿಜಯ್, ಸಂಧ್ಯಾ ಕಾವೇರಪ್ಪ ಮತ್ತಿತರರು ತಿಳಿಸಿದರು.
ಸುಂದರನಗರದ 31/1 ರಲ್ಲಿ 80 ಕುಟುಂಬಗಳಿಗೆ ಹಕ್ಕುಪತ್ರ ಇಲ್ಲ. ಬಡ ಕೂಲಿ ಕಾರ್ಮಿಕರು ಸ್ವಂತ ನೆಲೆ ಕಂಡುಕೊಳ್ಳಲು ಈ ಭಾಗದಲ್ಲಿ ವಾಸ್ತವ್ಯ ಹೂಡಿ ಹಲವು ದಶಕಗಳೇ ಕಳೆದು ಹೋದರು ಇವರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಯಾರೂ ಕೂಡ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಮಿತಿ ಆಶ್ರಯದಲ್ಲಿ ನಿವಾಸಿಗಳನ್ನು ಒಗ್ಗೂಡಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಸಂಬಂಧಿಸಿದವರಿಗೆ ಮನವಿ ಸಲ್ಲಿಸಿ ಹಕ್ಕುಪತ್ರ ಒದಗಿಸಲು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
Back to top button
error: Content is protected !!