ಕುಶಾಲನಗರ, ಸೆ 27: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಪಟ್ಟಣ ಮಾರಾಟ ಸಮಿತಿ ಸಭೆ ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿರು ಸಾಲ ಸೌಲಭ್ಯಕ್ಕೆ ಬೀದಿಬದಿ ವ್ಯಾಪಾರಿಗಳ ನೋಂದಣಿ ಮಾಡುವುದು ಹಾಗೂ ಸೌಲಭ್ಯ ಕಲ್ಪಿಸುವ ಬಗ್ಗೆ, ಮಾರಾಟ ವಲಯ, ಸ್ವನಿಧಿ ಸೇ ಸಮೃದ್ದಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ಲಿಂಕೇಜ್‌ಮಾಡುವ ಬಗ್ಗೆ, ಬೀದಿ ಬದಿ ವ್ಯಾಪಾರಸ್ಥರನ್ನು ಡಿಜಿಟಲ್ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು, ಬ್ಯಾಂಕುಗಳ ವತಿಯಿಂದ ಕ್ಯೂ ಆರ್ ಕೋಡ್ ಮತ್ತು ಸೌಂಡ್ ಬಾಕ್ಸ್ ವಿತರಣೆ ಮಾಡುವ ಬಗ್ಗೆ ಚರ್ಚೆ ನಡೆಯಿತು.
ಬ್ಯಾಂಕಿನ ಮೂಲಕ ಬೀದಿಬದಿ ವ್ಯಾಪಾರಿಗಳ ಸಿಬಿಲ್ ಅಂಕಗಳು ಕಡಿತಗೊಳ್ಳುತ್ತಿರುವ ಬಗ್ಗೆ ವ್ಯಾಪಾರಿಗಳು ಸಭೆಯ ಗಮನಕ್ಕೆ ತಂದರು.ಖಾತೆಯಲ್ಲಿ ಹಣವಿದ್ದರೂ ಸಾಲಕಡಿತ ಸಕಾಲದಲ್ಲಿ ಮಾಡದ ಕಾರಣ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಸಂಚಾರಿ ಠಾಣಾಧಿಕಾರಿ ಕಾಶಿನಾಥ್ ಬಗಲಿ ಮಾತನಾಡಿ, ಹಲವು ಕಡೆ ಬೀದಿಬದಿ ವ್ಯಾಪಾರದ ಸಂದರ್ಭ ವಾಹನ ದಟ್ಟಣೆ ಉಂಟಾಗುತ್ತಿದೆ. ಗ್ರಾಹಕರ ವಾಹನಗಳು ಸಮರ್ಪಕವಾಗಿ ಪಾರ್ಕಿಂಗ್ ಮಾಡುವಂತೆ ವ್ಯಾಪಾರಿಗಳು ಸೂಚಿಸಬೇಕಿದೆ ಎಂದು ತಿಳಿಸಿದರು.
ಉತ್ತಮ ಸ್ಥಳದಲ್ಲಿ ವೆಂಡರ್ ಜೋನ್ ಸ್ಥಾಪನೆಗೆ ಬಗ್ಗೆ ಸಲಹೆ ಪಡೆಯಲಾಯಿತು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಸಶಕ್ತೀಕರಣ, ಸಬಲೀಕರಣಕ್ಕೆ ಪುರಸಭೆ ಎಲ್ಲಾ ರೀತಿಯಲ್ಲಿ ಕ್ರಮವಹಿಸಲಿದೆ. ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಿದೆ. ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ತಾಳ್ಮೆ ವಹಿಸಬೇಕಿದೆ. ಸರಕಾರದ ನೀತಿ,ನಿಯಮಗಳ, ಸಂಚಾರಿ ವ್ಯವಸ್ಥೆ ಪರಿಪಾಲನೆಗೆ, ಸ್ವಚ್ಚತೆ ಪಾಲನೆ, ಗುಣಮಟ್ಟದ ಆಹಾರಗಳನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭ ಬೀದಿಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಜಗದೀಶ್, ಮಹಿಳಾ ಘಟಕದ ಅಧ್ಯಕ್ಷೆ ಸಲೀನಾ, ಪ್ರಮುಖರಾದ ಸುಧಾ, ಗಣೇಶ್ ಸೇರಿದಂತೆ ವಿವಿಧ ಬ್ಯಾಂಕ್ ಅಧಿಕಾರಿಗಳು ಇದ್ದರು.
Back to top button
error: Content is protected !!