ಪ್ರಕಟಣೆ
ಕೊಡಗು ಸೈನಿಕ ಶಾಲೆಯ ನೂತನ ಪ್ರಾಂಶುಪಾಲರಾಗಿ ಕರ್ನಲ್ ಅಮರ್ ಜೀತ್ ಸಿಂಗ್ ಅಧಿಕಾರ ಸ್ವೀಕಾರ

ಕುಶಾಲನಗರ, ಸೆ 06: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ 8ನೇ ನೂತನ ಪ್ರಾಂಶುಪಾಲರಾಗಿ ಕರ್ನಲ್ ಅಮರ್ ಜೀತ್ ಸಿಂಗ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸೈನಿಕ ಶಾಲೆಯ ನಿರ್ಗಮಿತ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್ ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರಿಸಿದರು.
ಶಾಲೆಯ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ ಸಿಂಗ್ , ಶಾಲೆಯ ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಶಿಸ್ತನ್ನು ಪಾಲಿಸುವುದರೊಂದಿಗೆ ಗೌರವ, ಸಮಗ್ರತೆ ಮತ್ತು ಧೈರ್ಯದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಕಾಯ್ದುಕೊಂಡು, ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮಲ್ಲಿ ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಭ್ರಾತೃತ್ವ ಭಾವನೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
ಶಾಲೆಯ ಉಪಪ್ರಾಂಶುಪಾಲ ಲೀಡರ್ ಮನ್‌ಪ್ರೀತ್ ಸಿಂಗ್, ಹಿರಿಯ ಶಿಕ್ಷಕ ಎನ್.ವಿಬಿನ್ ಕುಮಾರ್, ಬೋಧಕ-ಬೋಧಕೇತರ ವರ್ಗ, ಎನ್ ಸಿ ಸಿ ಸಿಬ್ಬಂದಿವರ್ಗ, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪರಿಚಯ :ಕರ್ನಲ್ ಅಮರ್ ಜೀತ್ ಸಿಂಗ್ ಜೂನ್ ೨೦೦೬ರಿಂದ ೨೦೦೭ರವರೆಗೆ ಲೈನ್ ಆಫ್ ಕಂಟ್ರೋಲ್(ಎಲ್ ಒ ಸಿ)ಯಲ್ಲಿ ಸೈನ್ಯದ ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಇಂಡೋ-ಚೈನಾ ಗಡಿಯಲ್ಲಿ ಉತ್ತರ ಸಿಕ್ಕಿಂನಲ್ಲಿ ಚೀನೀ ಭಾಷೆಯ ಅನುವಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅತ್ಯುತ್ತಮ ಸೇವೆಯ ಫಲವಾಗಿ ೨೦೦೮ ಮತ್ತು ೨೦೨೦ರಲ್ಲಿ ಎರಡು ಬಾರಿ ಸೇನಾ ಕಮಾಂಡರ್ ಪ್ರಶಂಸಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೊದಲಿಗೆ ಶಾಲೆಯ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಗೌರವ ಸಲ್ಲಿಸಿದರು. ನಂತರ ಶಾಲೆಯ ಕೆಡೆಟ್ ಪ್ರತೀಕ್ ವಿ ಮಠನ ನೇತೃತ್ವದಲ್ಲಿ ಆಯೋಜಿಸಿದ್ದ ಎನ್ ಸಿ ಸಿ ಘಟಕದ ಪಥಸಂಚಲನವನ್ನು ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು.