ಸಭೆ
ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದ ಮಹಾಸಭೆ

ಕುಶಾಲನಗರ, ಆ 26: ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದ ಸರ್ವತೋಮುಖ ಬೆಳವಣಿಗೆಗೆ ಸದಸ್ಯರು ಕೈಜೋಡಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮನವಿ ಮಾಡಿದರು.
ಕೂಡಿಗೆಯಲ್ಲಿ ನಡೆದ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 117.95 ಕೋಟಿ ರೂಗಳ ಆರ್ಥಿಕ ವಹಿವಾಟು ನಡೆಸಿದ್ದು 70.33 ಲಕ್ಷ ರೂಗಳ ನಿವ್ವಳ ಲಾಭಗಳಿಸಿ ಪ್ರಗತಿಯ ದಾರಿಯಲ್ಲಿ ಮುನ್ನಡೆಯುತ್ತಿದೆ. ಹಾಗೆಯೇ ಸಂಘದ ಸದಸ್ಯರಿಗೆ ಶೇ.11 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಸಂಘದ ಕಟ್ಟಡಗಳನ್ನು ಆಧುನಿಕರಿಸಿ ರೈತ ಸಮುದಾಯ ಭವನ ನಿರ್ಮಿಸಿದ್ದು ಕೆಲವೇ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಲಾಗುವುದು. ಹಿರಿಯ ಸಹಕಾರಿಗಳು ಕಟ್ಟಿ ಬೆಳೆಸಿರುವ ಸಹಕಾರ ಸಂಘ 2028 ಕ್ಕೆ ಶತಮಾನೋತ್ಸವಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ವಿನೂತನವಾಗಿ ಅಭಿವೃದ್ದಿ ಪಡಿಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಹಾಲೀ ಇರುವ ಸಹಕಾರ ಸಂಘವನ್ನು ಕೂಡಿಗೆಯಲ್ಲಿ ಪ್ರತ್ಯೇಕ ಸಹಕಾರ ಸಂಘ ತೆರೆಯಲು ನೀಡಿದ ಸಾರ್ವಜನಿಕರೊಬ್ಬರು ನೀಡಿದ 52 ಮಂದಿಯ ಸಹಿಯುಳ್ಳ ಅರ್ಜಿಯ ಬಗ್ಗೆ ಹೇಮಂತಕುಮಾರ್ ಸಭೆಯಲ್ಲಿ ವಿವರಿಸಿದಾಗ, ವೈಯುಕ್ತಿಕ ಭಿನ್ನಾಭಿಪ್ರಾಯಗಳಿಗಾಗಿ ಅಥವಾ ಅನಗತ್ಯ ಪ್ರತಿಷ್ಠೆಗಳಿಗಾಗಿ ಹಾಲೀ ಇರುವ ಸಹಕಾರ ಸಂಘವನ್ನು ಒಡೆದು ಯಾವುದೇ ಕಾರಣಕ್ಕೂ ಮತ್ತೊಂದು ಸಹಕಾರ ಸಂಘವನ್ನು ತೆರೆಯುವ ಪ್ರಸ್ತಾಪವನ್ನು ವಿರೋಧಿಸಲಾಯಿತು.
ಈ ಬಗ್ಗೆ ವಕೀಲ ನಾಗೇಂದ್ರಬಾಬು, ಕೂಡಿಗೆ ಗ್ರಾಪಂ ಸದಸ್ಯರೂ ಆದ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಪಿ.ಹಮೀದ್, ಹಿರಿಯ ಸಹಕಾರಿ ಕೆ.ಆರ್.ರಂಗಸ್ವಾಮಿ, ಸಿ.ವಿ.ನಾಗೇಶ್, ಕೆ.ವಿ.ಸಣ್ಣಪ್ಪ, ಸುನಿಲ್ ರಾಜಾರಾವ್, ಕೆ.ಕೆ.ನಾಗರಾಜಶೆಟ್ಟಿ ಮೊದಲಾದವರು ಅರ್ಜಿ ಬಗ್ಗೆ ವಿರೋಧ ವ್ಯಕ್ತಪಡಿಸಿ, ಇರುವ ಸಹಕಾರ ಸಂಘ ಕೂಡಿಗೆಯಲ್ಲಿಯೇ ಇರುವುದರಿಂದ ಇದರ ಪ್ರಸ್ತಾಪವೇ ಬೇಡ ಎಂದರು.
ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಸಹಕಾರ ಸಂಘದ ಆಡಳಿತ ಮಂಡಳಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕಠಿಣ ಕ್ರಮಕ್ಕೂ ಮಹಾಸಭೆಯಲ್ಲಿ ಸದಸ್ಯರು ಅಗ್ರಹಿಸಿದರು.
ಸಹಕಾರ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ಶಿವಣ್ಣ ಎಂಬವರು ನಿವೃತ್ತಿ ಹೊಂದಿದ ಸಂದರ್ಭ ಸಹಕಾರ ಸಂಘಕ್ಕೆ ಮಾಡಿ ಹೋದ ವಂಚನೆ ಹಾಗೂ ಕರ್ತವ್ಯ ದ್ರೋಹದ ಬಗ್ಗೆ ಸಭಾಧ್ಯಕ್ಷ ಹೇಮಂತಕುಮಾರ್ ಮಹಾಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಟಿ.ಪಿ.ಹಮೀದ್ ಮಾತನಾಡಿ, ಸಹಕಾರ ಸಂಘದ ಪ್ರಸಕ್ತ ಆಡಳಿತ ಮಂಡಳಿ ವಾರ್ಷಿಕವಾಗಿ ಎರಡು ಕೋಟಿ ಲಾಭ ಗಳಿಸುವ ಗುರಿ ಹೊಂದಿದೆ. ಕೂಡಿಗೆ, ಸೀಗೆಹೊಸೂರಿನ ಸಂಘದ ಆಸ್ತಿಗಳನ್ನು ಲಾಭದಾಯಕವಾಗಿಸುವತ್ತ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಸಭೆಯಲ್ಲಿ ಕೆಲವು ವಿಚಾರಗಳು ಪ್ರಸ್ತಾಪವಾದ ಸಂದರ್ಭ ಸದಸ್ಯರ ಗುಂಪುಗಳ ನಡುವೆ ಪರ ವಿರೋಧ ಮಾತಿನ ಚಕಮಕಿ ಕೆಲವು ಕಾಲ ಗೊಂದಲ ಉಂಟುಮಾಡಿತ್ತು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ತಮ್ಮಣ್ಣೇಗೌಡ, ಕೆ.ಟಿ.ಅರುಣಕುಮಾರ್, ನಾಗರಾಜು, ಕುಮಾರ್, ಪಾರ್ವತಮ್ಮ, ಆರ್.ಕೆ.ನಾಗೇಂದ್ರ, ಕೃಷ್ಣೇಗೌಡ, ರಮೇಶ್, ಪವಿತ್ರ, ಸಹಕಾರ ಸಂಘದ ಮೇಲ್ವಿಚಾರಕಿ ಸುಮಂತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮೀನಾ, ಕೂಡಿಗೆ ಗ್ರಾಪಂ ಅಧ್ಯಕ್ಷ ಕೆ.ಟಿ.ಗಿರೀಶ್ ಕುಮಾರ್, ವೃತ್ತಿ ನಿರ್ದೇಶಕ ನಾಗೇಂದ್ರಬಾಬು, ಚಂದ್ರಶೇಖರ್ ಮತ್ತಿತರರು ಇದ್ದರು.
ಸಂಘದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.