ಕುಶಾಲನಗರ ಸೆ 6 : ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವ ಮೂಲಕ ಗಣೇಶ ಉತ್ಸವ ಆಚರಿಸಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿಗೆ ಬುಧವಾರ ಭೇಟಿ ನೀಡಿದ ಸಚಿವರು ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರು ಹಾಕಿ ಪರಿಸರ ಜಾಗೃತಿ ಮೂಡಿಸಿದರು.ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂಬ ಚಿಂತನೆ ಮಾಡಲಾಗಿದೆ.
ದಿನನಿತ್ಯ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ವಾಹನಗಳಿಂದ ಹೊರಬರುತ್ತಿರುವ ಹೊಗೆಯಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಬೇಕಾಗಿದೆ. ಪ್ರತಿಯೊಬ್ಬರೂ ಈ ವರ್ಷ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವ ಮೂಲಕ ಗಣೇಶ ಉತ್ಸವ ಆಚರಿಸಬೇಕು ಎಂದು ಸಲಹೆ ನೀಡಿದ ಸಚಿವರು ರಾಸಾಯನಿಕಯುಕ್ತ ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಉಪಯೋಗಿಸಿದರೆ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಜನರಿಗೆ ಅಪಾಯ ಉಂಟಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪರಿಸರ ಸಂರಕ್ಷಣೆ ಹಾಗೂ ಜಾಗೃತಿಗಾಗಿ ಈ ವರ್ಷ ರಾಜ್ಯಾದ್ಯಂತ ಸುಮಾರು 5 ಕೋಟಿಗೂ ಹೆಚ್ಚಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕೊಡಗು ಹಾಗೂ ಹಾಸನ ಭಾಗದಲ್ಲಿ ಹಸಿರು ಪ್ರದೇಶ ವ್ಯಾಪಕವಾಗಿದೆ.ಈ ಹಿನ್ನೆಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ಕಳೆದ ಅನೇಕ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದ ಉಂಟಾಗುತ್ತಿರುವ ಮಾನವ ಹಾನಿಯನ್ನು ತಡೆಗಟ್ಟುವ ಕೆಲಸ ಮಾಡಬೇಕಾಗಿದೆ.ಆನೆ ತುಳಿತ ಮತ್ತು ಹುಲಿ ಹಾವಳಿಯಿಂದ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರಕೃತಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ.ಈ ಹಿನ್ನೆಲೆಯಲ್ಲಿ ಪ್ರಕೃತಿಯೊಂದಿಗೆ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ವಿದ್ಯಾರ್ಥಿಗಳು ಪ್ರಕೃತಿ, ಪರಿಸರದ ಬಗ್ಗೆ ಹೆಚ್ಚಿನ ಆಧ್ಯಯನ ಮಾಡಬೇಕು.ಮುಂದಿನ ದಿನಮಾನಗಳಲ್ಲಿ ಎದುರಾಗುವ ದೊಡ್ಡ ಸವಾಲು ಅಂದ್ರೆ ಹವಾಮಾನ ಬದಲಾವಣೆ. ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನದಿಂದ ಎಲ್ಲಾ ಕಡೆ ಆಹಾರ,ನೀರು,ಗಾಳಿಯಲ್ಲಿ ಮಾಲಿನ್ಯ ಉಂಟಾಗುತ್ತಿದೆ.ಇದರಿಂದ ಏನೇನು ಅನಾಹುತಗಳು ಆಗುತ್ತಿದೆ ಎಂಬುದನ್ನು ಗೊತ್ತಿದೆ. ವಿದ್ಯಾರ್ಥಿಗಳು ಪ್ರಕೃತಿ ಹಾಗೂ ಪ್ರಾಣಿಗಳ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು ಎಂದರು.
ಸ್ವಚ್ಛತೆ ಕಾಪಾಡಬೇಕು.ಶುದ್ಧ ಗಾಳಿ,ನೀರು ಹಾಗೂ ಆಹಾರಕ್ಕಾಗಿ ನಾವು ಮರಗಿಡ ಬೆಳೆಸಬೇಕು.ಅರಣ್ಯ ಸಂರಕ್ಷಣೆ ಮಾಡಬೇಕು ಎಂದರು.
ವಕೀಲ ಚಂದ್ರಮೌಳಿ ಅವರು ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ತಮ್ಮ ತಂದೆತಾಯಿಯವರ ಹೆಸರಿನಲ್ಲಿ ಪದವಿ,ಪಿಯು ಹಾಗೂ ಪ್ರೌಢಶಾಲೆ ಶಿಕ್ಷಣ ಸಂಸ್ಥೆಗಳನ್ನು ಆರಂಬಿಸಿರುವುದು ಶ್ಲಾಘನೀಯ. ಇವರು ಸಮಾಜಕ್ಕೆ ಉತ್ತಮ ಕೊಡಗು ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಇವರ ಸಾಮಾಜಿಕ ಸೇವೆ ಹೀಗೆಯೇ ಮುಂದುವರೆಯಲಿ ಮುಂದೆ ಇವರಿಗೆ ದೊಡ್ಡ ಸ್ಥಾನಮಾನ ದೊರೆಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಈ ಸಂದರ್ಭ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ,ಕೊಡಗು ಜಿಲ್ಲಾ ಕಾಂಗ್ರೆಸ್ ಸದಸ್ಯ ಲಕ್ಷ್ಮಣ್, ಕೊಡ್ಲಿಪೇಟೆ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಖಜಾಂಜಿ ಡಾ.ಉದಯಕುಮಾರ್, ನಿರ್ದೇಶಕರಾದ ಯು.ವಿ.ಶಿವಪ್ರಸಾದ್,ಬಿ.ಕೆ.ಯತೀಶ್,ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್, ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪಿ. ಪ್ರಫುಲ್ ಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಆರ್.ನಿರಂಜನ್,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಪವರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎನ್.ಅಬ್ದುಲ್ ರಬ್ ಹಾಗೂ ಸಿಬ್ಬಂದಿ ವರ್ಗ ಇದ್ದರು. ಇದೇ ಸಂದರ್ಭ ಸಚಿವ ಈಶ್ವರ್ ಖಂಡ್ರೆ ಅವರನ್ನು ವಿದ್ಯಾಸಂಸ್ಥೆಯ ಪರವಾಗಿ ಅಧ್ಯಕ್ಷ ಚಂದ್ರಮೌಳಿ ಅವರು ಸನ್ಮಾನಿಸಿ ಗೌರವಿಸಿದರು.
Back to top button
error: Content is protected !!