ಕುಶಾಲನಗರ, ಆ 02: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ರಸ್ತೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸರ್ವೆ ಕಾರ್ಯದ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಹಾರಂಗಿ ಮುಖ್ಯ ರಸ್ತೆಯಿಂದ ಫಾರಂ ಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಚುನಾಯಿತ ಜನಪ್ರತಿನಿಧಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಕಳೆದ 30 ವರ್ಷಗಳಿಂದ ಸ್ಥಳೀಯ ನಿವಾಸಿಗಳು, ರೈತರು ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಸ್ಥಳೀಯರ ದೂರಿನನ್ವಯ ಎಡಿಸಿ ಅವರ ಸೂಚನೆ ಮೇರೆಗೆ 5 ನೇ ಬಾರಿಗೆ ರಸ್ತೆ ಸರ್ವೆ ಕಾರ್ಯ ಬುಧವಾರ ನಡೆಸಲಾಯಿತು. ಸರ್ವೆ ಸಂದರ್ಭ ಹಾಜರಿದ್ದ ಸ್ಥಳೀಯರು ಸರ್ವೆ ಕಾರ್ಯ ಸಮಾಧಾನಕರವಾಗಿಲ್ಲ, ಒಂದೊಂದು ಬಾರಿ ಸರ್ವೆ ನಡೆಸಿದಾಗಲೂ ಒಂದೊಂದು ವಿಭಿನ್ನ ವರದಿಗಳನ್ನು ನೀಡಲಾಗುತ್ತಿದೆ, ಈ ಮೂಲಕ ಗೊಂದಲ ಉಂಟುಮಾಡಲಾಗುತ್ತಿದೆ ಎಂದು ಸರ್ವೆಯರ್ ವಿರುದ್ದ ದೂರುದಾರರು ಹರಿಹಾಯ್ದ ಘಟನೆ ನಡೆಯಿತು.
ಸರ್ವೆ ವಿಚಾರದಲ್ಲಿ ರಾಜಕೀಯ ನಡೆಸಲಾಗುತ್ತಿದೆ. ನೊಂದವರ ಪರ ನ್ಯಾಯ ದೊರಕುತ್ತಿಲ್ಲ. ಹಲವು ಬಾರಿ ಹೋರಾಟ ನಡೆಸಿದರೂ ಕೂಡ ಇದುವರೆಗೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಈ ಹಿಂದೆ ನಡೆಸಿದ ಸರ್ವೆ ವರದಿಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಪ್ರತಿ ಬಾರಿ ಸರ್ವೆ ನಡೆಸಿದಾಗ ಬೇರೆ ಬೇರೆ ರೀತಿಯ ವರದಿ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಒಂದು ವಾರದೊಳಗೆ ಪರಿಹಾರ ಒದಗಿಸದಿದ್ದಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರಾದ ಹರ್ಷ, ರಜಾಕ್ ಅಹಮ್ಮದ್ ಎಚ್ಚರಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಸದಸ್ಯ ದಿನೇಶ್, ಕಳೆದ 35 ವರ್ಷಗಳಿಂದ ಈ ರಸ್ತೆ ಒತ್ತುವರಿ ತೆರವು ಸಾಧ್ಯವಾಗಿಲ್ಲ. ಈ ಸಂಬಂಧ ಹಲವರು ಜೈಲುಪಾಲಾಗಿದ್ದೂ ಇದೆ. ಬೆಳೆದ ಬೆಳೆ ಸಾಗಿಸಲು ರೈತರಿಗೆ ಸೂಕ್ತ ದಾರಿ ಇಲ್ಲದಂತಾಗಿದೆ. ನಕ್ಷೆಯಲ್ಲಿ 29 ಅಡಿ ರಸ್ತೆ ತೋರಿಸುತ್ತಿದ್ದು ಈಗಿರುವ ರಸ್ತೆ ಕಿರಿದಾದ ಸ್ಥಿತಿಯಲ್ಲಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು ಕೂಡ ಸಾಧ್ಯವಿಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಗಮನಹರಿಸಿ ಇಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಬೇಕಿದೆ ಎಂದು ಕೋರಿದರು.
ಈ ಸಂದರ್ಭ ಸ್ಥಳೀಯರಾದ ರಾಮೇಗೌಡ, ವಿನು, ಮತ್ತಾರಿ ಮಧು, ಸಚಿನ್, ಜಿಬಿ ರತ್ನಾಕರ್, ಕಂದಾಯ ನಿರೀಕ್ಷಕ ಸಂತೋಷ್ ಮತ್ತಿತರರು ಇದ್ದರು.
Back to top button
error: Content is protected !!