ವಿಶೇಷ

ತಂದೆ ತಾಯಿಯ ದಾಹ ನೀಗಿಸಿದ ಕೆರೆ ಅಭಿವೃದ್ದಿಗೊಳಿಸಿದ ಹರಪಳ್ಳಿ ರವೀಂದ್ರ: ಬಾಗಿನ ಅರ್ಪಣೆ

ಕುಶಾಲನಗರ, ಜು 29: ಸೋಮವಾರಪೇಟೆ ಯಡೂರು ಗ್ರಾಮದಲ್ಲಿರುವ ಸಬ್ಬಮ್ಮ ದೇವರ ಕೆರೆಗೆ ಸಮಾಜ ಸೇವಕ ಹರಪಳ್ಳಿ ರವೀಂದ್ರ ಶನಿವಾರ ಬಾಗಿನ ಅರ್ಪಿಸಿದರು.
ಹಲವು ವರ್ಷಗಳ ಕಾಲ ಬರಡಾಗಿ ಮೈದಾನದಂತಿದ್ದ ಎರಡು ಎಕರೆ ಪ್ರದೇಶದ ಕೆರೆಯನ್ನು‌ 2018 ರಲ್ಲಿ ಹರಪಳ್ಳಿ ರವೀಂದ್ರ ಅವರು ಬರೋಬ್ಬರಿ 9 ಲಕ್ಷ ವ್ಯಯಿಸಿ ಜೀರ್ಣೋದ್ದಾರಗೊಳಿಸಿದ್ದರು. ಅದರಂತೆ ತುಂಬಿ ತುಳುಕುತ್ತಿರುವ ಸುತ್ತಮುತ್ತಲ ಗ್ರಾಮಗಳಿಗೆ ನೀರಿನಾಸರೆಯಾಗಿರುವ ಕೆರೆಗೆ ಸಾಂಪ್ರದಾಯಿಕವಾಗಿ ಬಾಗಿನ ಸಲ್ಲಿಸಲಾಯಿತು.
ವಾದ್ಯಗೋಷ್ಠಿಗಳ ಸಮ್ಮುಖದಲ್ಲಿ ಕೆರೆಯ ಶಾಸ್ತ್ರೋಕ್ತವಾಗಿ ಪೂಜಾ ವಿಧಿ ನೆರವೇರಿಸಿದ ರವೀಂದ್ರ ಮತ್ತು ಅವರ ಗ್ರಾಮಾಭಿವೃದ್ದಿ‌ ಸಮಿತಿ ಪ್ರಮುಖರು ಕೆರೆಗೆ ಬಾಗಿನ ಅರ್ಪಿಸಿದರು. ನಂತರ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರಪಳ್ಳಿ ರವೀಂದ್ರ, ಯಡೂರು ಮಾರ್ಗವಾಗಿ ಹರಪಳ್ಳಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ತನ್ನ ತಂದೆ ತಾಯಿ ಮಾರ್ಗ‌ಮಧ್ಯೆ ಈ‌ ಕೆರೆಯ ನೀರಿನಿಂದ ತಮ್ಮ ಬಾಯಾರಿಕೆ ನೀಗಿಸುತ್ತಿದ್ದರು. ನಂತರ ದ ವರ್ಷಗಳಲ್ಲಿ ಬರಡಾದ ಕೆರೆಯ ಪುನಶ್ಚೇತನಕ್ಕೆ ಪಣತೊಟ್ಟು ಅಭಿವೃದ್ಧಿಪಡಿಸಿದ‌ ಹಿನ್ನಲೆಯಲ್ಲಿ ಕೆರೆ ಇಂದು ಸಮೃದ್ದವಾಗಿದೆ. ಕೆರೆ ಅಭಿವೃದ್ಧಿ ಕಾರ್ಯ ಕೈಗೊಂಡಾಗ ಆರಂಭದಲ್ಲಿ ಗ್ರಾಮಸ್ಥರಿಗೆ ನಂಬಲು ಸಾಧ್ಯವಿರಲಿಲ್ಲ. ಆದರೆ ಎಲ್ಲರ ಸಹಕಾರದಿಂದ ಕೆರೆ ಅಭಿವೃದ್ಧಿ ಸಾಧ್ಯವಾಯಿತು.
ಪ್ರತಿ ವರ್ಷ ಕೂಡ‌ ಇಲ್ಲಿ ಬಾಗಿನ ಅರ್ಪಿಸುವ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಇದೇ ಮಾದರಿಯಲ್ಲಿ ಆನೆಕೆರೆಯನ್ನು ಕೂಡ ಜೀರ್ಣೋದ್ದಾರ ಮಾಡಲಾಗಿದೆ. ಶಿಕ್ಷಣ ಸೌಲಭ್ಯ, ಜಲಮೂಲ, ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಕಾರ್ಯಗಳು ತನ್ನ ಜೀವನದಲ್ಲಿ ಸಾರ್ಥಕತೆ ಉಂಟುಮಾಡುತ್ತಿದೆ ಎಂದರು.
ಯಡೂರು ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಕೊಡುಗೈ ದಾನಿ ಹರಪಳ್ಳಿ ರವೀಂದ್ರ ಅವರ ನಿಸ್ವಾರ್ಥ ಸೇವೆಯ ಪರಿಣಾಮ ಹಲವು ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ಧಿ ಕಾಣುತ್ತಿದ್ದಾರೆ. ಕೆರೆಯ ಅಭಿವೃದ್ಧಿಯಿಂದ ಕೃಷಿಗೆ ನೀರಿನ ಸೌಲಭ್ಯಕ್ಕೆ ಅನುಕೂಲವಾಗಿದೆ ಎಂದರು.
ಗ್ರಾಮದ ರೈತ ಮಲ್ಲಪ್ಪ ಮಾತನಾಡಿ, ಕೆರೆ ವ್ಯಾಪ್ತಿಯ ಕಲ್ಕಂದೂರು, ಹೊಸಬೀಡು, ದೊಡ್ಡತೋಳೂರು, ಕಂಬಳ್ಳಿ ಮತ್ತಿತರ ಗ್ರಾಮಗಳ ನೂರಾರು ಎಕೆರೆ ಕೃಷಿ ಭೂಮಿಗೆ ಆಸರೆಯಾಗಿದ್ದ ಸಬ್ಬಮ್ಮ ಕೆರೆ ಜೀರ್ಣೋದ್ಧಾರದಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲ ದೊರೆತಿದೆ ಎಂದರು.
ಈ ಸಂದರ್ಭ ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಿತಿ‌ ಉಪಾಧ್ಯಕ್ಷ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಪವನ್, ಪ್ರಮುಖರಾದ ಸುಧೀರ್, ಭರತ್, ಶರತ್, ರವಿ, ಪ್ರಸಾದ್ ಕುಟ್ಟಪ್ಪ, ಅಲಿಕುಟ್ಟಿ, ಖಾಸಿಂ, ಹರಪಳ್ಳಿ ರವೀಂದ್ರ ಅಭಿಮಾನಿ ಬಳಗದ ನಾಗರಾಜು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!