ಪರಿಸರ

ಕುಶಾಲನಗರ ಐಪಿಎಂಸಿಎಸ್ ವನಸಿರಿ ಯೋಜನೆಗೆ ಚಾಲನೆ

ಕುಶಾಲನಗರ, ಜು‌ 15:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ‌ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವನಸಿರಿ ಯೋಜನೆಯಡಿ ಹಮ್ಮಿಕೊಂಡಿರುವ ಗಿಡ‌ನೆಟ್ಟು ನಿರ್ವಹಿಸಿ ಬೆಳೆಸುವ ಕಾರ್ಯಕ್ರಮ ನಡೆಯಿತು.

ಅರಣ್ಯ ಇಲಾಖೆ, ಕುಶಾಲನಗರದ ಪುರಸಭೆ ಹಾಗೂ ಎಂಜಿಎಂ‌ ಕಾಲೇಜು ಸಹಯೋಗದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಜಿಪಂ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ ಚಾಲನೆ ನೀಡಿದರು. ಸಹಕಾರ ಸಂಘದ ಮೂಲಕ ಕುಶಾಲನಗರದಲ್ಲಿ ಹೆಚ್ಚಿನ ಸೇವೆ ಲಭಿಸುವಂತಾಗಲಿ. ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮ ಅರಣ್ಯ ಇಲಾಖೆ‌ ಮತ್ತು ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವಂತಾಗಬೇಕು ಎಂದರು.

ವನಸಿರಿ ಯೋಜನೆಗೆ ಚಾಲನೆ ‌ನೀಡಿದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಶುಚಿತ್ವ, ಪರಿಸರ ಮಾಲಿನ್ಯ ಕಾಪಾಡುವ ಬಗ್ಗೆ ಪ್ರತಿಯೊಬ್ಬರಿಗೂ ಕನಿಷ್ಠ ಅರಿವು ಅಗತ್ಯವಿದೆ. ಈ‌ ಹಿಂದೆ ನಡೆದಂತಹ ಕೆಲವೊಂದು ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳಿಂದ ಪರಿಸರ ಅವನತಿ ಹೊಂದಿದೆ. ಕಾಲಕಾಲಕ್ಕೆ ಪರಿಸರ ಕ್ಷೀಣಿಸಿ‌ ಇಂದು ಪರಿಸರವನ್ನು ಕಡ್ಡಾಯವಾಗಿ ಉಳಿಸಿ ಬೆಳಸುವ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಕ್ತಿ ದಿನಪತ್ರಿಕೆ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ಒಂದೆಡೆ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುತ್ತಿದ್ದಂತೆ ಮತ್ತೊಂದೆಡೆ ಅರಣ್ಯ‌ ನಾಶವಾಗುವುದು ವಿಪರ್ಯಾಸದ ಸಂಗತಿ. ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕಿದೆ. ಸಂಕಲ್ಪ ತೊಡಬೇಕಿದೆ ಎಂದರು.

ಡಿಎಫ್ ಒ ಎ.ಟಿ.ಪೂವಯ್ಯ ಮಾತನಾಡಿ, ಪರಿಸರ ಉಳಿಸಿ ಬೆಳೆಸವ ನಿಟ್ಟಿನಲ್ಲಿ ರಾಜ್ಯಾದ್ಯಂತ 5 ಕೋಟಿ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ‌ ಮೂಲಕ ಅರಣ್ಯ ಪ್ರದೇಶ ವಿಸ್ತರಣೆಗೆ ಕ್ರಮವಹಿಸಲಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ವಿ.ಪಿ ಶಶಿಧರ್ ಮಾತನಾಡಿ, ವಾರ್ಷಿಕ ವಿಧಿ ರೀತಿಯಲ್ಲಿ ನಡೆದು ಬರುತ್ತಿರುವ ವನಮಹೋತ್ಸವ ಕಾರ್ಯಕ್ರಮ‌ ಫಲಪ್ರದವಾಗಿ ಜನೋಪಯೋಗಿ ಆಗಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಿದೆ. ಪ್ರಕೃತಿ ಉಳಿಸಿ ಬೆಳೆಸುವ ಪರಿಪಾಠ ಸ್ವಯಂಪ್ರೇರಿತವಾಗಿ ಆಗಬೇಕಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ‌ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ‌ಅಶೀರ್ವಚನ ನೀಡಿದರು. ಮಾನವನಿಂದಲೇ ನಾಶವಾಗುತ್ತಿರುವ ಪರಿಸರವನ್ನು ಮನುಷ್ಯರೇ ಬೆಳೆಸುವಂತಾಗಬೇಕಿದೆ. ಈಗಾಗಲೆ ಪರಿಸರ ಅಸಮತೋಲನ‌ಹಲ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಇದು ನಿಯಂತ್ರಣಕ್ಕೆ ತರುವಲ್ಲಿ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಾಲನಗರಕ್ಕೆ ಸಂಘದ ಕೊಡುಗೆ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ, ಹಿನ್ನಲೆ ಒದಗಿಸಿದರು. ಮುಂದಿನ ದಿನಗಳಲ್ಲಿ ಸಂಘದ‌ ಕಾರ್ಯವ್ಯಾಪ್ತಿ ಮಡಿಕೇರಿ ತಾಲೂಕಿಗೆ ವಿಸ್ತರಿಸುವ ಚಿಂತನೆ ಹೊಂದಲಾಗಿದೆ. ಸಮಾಜಕ್ಕೆ ತನ್ನದೇ ಆದ ಸೇವೆ ಒದಗಿಸಲಾಗುತ್ತಿದೆ. ಸಂಘದ ಲಾಭಾಂಶದ ಒಂದು ಪಾಲನ್ನು ಈ ವನಸಿರಿ ಯೋಜನೆಗೆ ಮೀಸಲಿರಿಸಲಾಗಿದೆ. ಕಾಟಾಚಾರಕ್ಕೆ ಗಿಡ ನೆಟ್ಟು ಸುಮ್ಮನಾಗದೆ, ನೆಟ್ಟ ಗಿಡ ಸಂರಕ್ಷಿಸಿ ಬೆಳೆಸುವ ಬಗ್ಗೆ ಜವಾಬ್ದಾರಿ ತೋರಬೇಕಿದೆ ಎಂದರು.

ಪುರಸಭೆ ಸದಸ್ಯ ಸುಂದರೇಶ್, ಎಸಿಎಫ್ ಗೋಪಾಲ್, ಆರ್ ಎಫ್ ಒ ಶಿವರಾಂ, ಕಾಲೇಜು ಅಧ್ಯಕ್ಷ ಶಂಭುಲಿಂಗಪ್ಪ, ಹಿರಿಯ ಸಹಕಾರಿ ಕುಮಾರಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!