ಕುಶಾಲನಗರ, ಜು 08:ಕುಶಾಲನಗರದ ಪುರಸಭೆ ಸದಸ್ಯ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಶೇಖ್ ಖಲೀಮುಲ್ಲಾ ಅವರ ಅಭಿಮಾನಿ ಬಳಗದಿಂದ ಮಡಿಕೇರಿ ಕ್ಷೇತ್ರ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕುಶಾಲನಗರದ ಇಂದಿರಾ ಬಡಾವಣೆಯ ದಾರುಲ್ ಉಲುಂ ಮದರಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶಾಸಕ ಡಾ.ಮಂಥರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಈ ಬಾರಿ ಎಲ್ಲರ ಸಹಕಾರದಿಂದ ಕೊಡಗಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಯುವ ಶಾಸಕ ಮಂಥರ್ ಗೌಡ ಕೊಡಗಿಗೆ ಕಾಲಿಟ್ಟು ಕಾಂಗ್ರೆಸ್ ನಲ್ಲಿ ಹೊಸ ಛಾಪು ಮೂಡಿಸಿದ ಪರಿಣಾಮ ಮನೆಮಾತಾಗಿ ಇಂದು ಶಾಸಕರಾಗಿ ಗೆಲುವು ಸಾಧಿಸಿರುವುದು ಶ್ಲಾಘನೀಯ ವಿಚಾರ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ
ಮಂತ್ರಿಯಾಗಿ ಆಯ್ಕೆಯಾಗುವಂತೆ ಶುಭ ಹಾರೈಸಿದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, 25 ವರ್ಷದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ, ಧಾರ್ಮಿಕ ಅಸಮಾನತೆ ತೊಡೆದುಹಾಕಲು ಪಣತೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ನೂತನ ಶಾಸಕರು ಎಲ್ಲರನ್ನೂ ಜಾತ್ಯಾತೀತವಾಗಿ, ಸಮಾನವಾಗಿ ಕರೆದೊಯ್ಯುವ ಭರವಸೆ ವ್ಯಕ್ತಪಡಿಸಿದರು.
ಹಿರಿಯ ವಕೀಲ, ಮುಖಂಡ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಎಲ್ಲಾ ನಾಯಕರ ಒಮ್ಮತದ ಕಾರಣ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಶಾಸಕರ ಗೆಲುವಿನಲ್ಲಿ ಪ್ರತಿಯೊಬ್ಬ ಮುಖಂಡರ ಪಾತ್ರ ಮಹತ್ವದ್ದಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಪಿ.ಚಂದ್ರಕಲಾ ಮಾತನಾಡಿ, ಮುಂದಿನ ದಿನಗಳಲ್ಲಿ ಕೊಡಗನ್ನು ಸಂಪೂರ್ಣ ಕಾಂಗ್ರೆಸ್ ಮಯವಾಗಿಸುವ ನಿಟ್ಟಿನಲ್ಲಿ ಪಣತೊಡಬೇಕಿದೆ. ಒಂದು ಮನೆ 16 ಬಾಗಿಲುಗಳಾಗಿದ್ದ ಕುಶಾಲನಗರ ಕಾಂಗ್ರೆಸ್ ಇದೀಗ ಸರಿದಾರಿಗೆ ಬಂದಿರುವುದು ಸಾಮಾಧಾನದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶೇಖ್ ಖಲೀಮುಲ್ಲಾ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ನೆಲೆಸುವಂತಾಗಿ ಕೊಡಗನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶಾಸಕರು ಕ್ರಮವಹಿಸಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಮತದಾರರು, ಕಾರ್ಯಕರ್ತರ ಆಶಯಗಳು ಈಡೇರಿಸುವುದು ನನ್ನ ಆದ್ಯ ಕರ್ತವ್ಯ. ಎಲ್ಲರ ನಿರೀಕ್ಷೆ, ಬೇಡಿಕೆಗಳು ಈಡೇರಿಸಿದ ಬಳಿಕ ದೊರಕುವ ಸನ್ಮಾನ ಮೌಲ್ಯಯುತವಾಗಿರುತ್ತದೆ ಎಂದರು.
ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಬೆಂಗಳೂರಿನ ಮುಖಂಡ ರಫೀಕ್, ಧರ್ಮಗುರು ತಮ್ಲಿಖ್ ಧಾರಿಮಿ ಮಾತನಾಡಿದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಉಪಾಧ್ಯಕ್ಷ ಕಾಂತರಾಜು, ಲೋಕೇಶ್, ಮುಖಂಡರಾದ ಟಿ.ಪಿ.ಹಮೀದ್, ಯಾಕೂಬ್, ಅಬ್ದುಲ್ ಲತೀಫ್, ಕಾರ್ಯಕ್ರಮ ಸಂಘಟಕರಾದ ಶಿವಶಂಕರ್, ಕಿರಣ್, ಆದಂ, ಚಿರು, ಎಂ.ಇ.ಮುಸ್ತಾಫ ಸೇರಿದಂತೆ ಪುರಸಭೆ ಸದಸ್ಯರುಗಳು, ವಿವಿಧ ಘಟನಗಳ ಪದಾಧಿಕಾರಿಗಳು ಇದ್ದರು.
Back to top button
error: Content is protected !!