ಕುಶಾಲನಗರ, ಫೆ 17: ಕೂಡುಮಂಗಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಗ್ರಾಮಪಂಚಾಯತ್ ಸದಸ್ಯರೊಬ್ಬರು ರಸ್ತೆ ಅತಿಕ್ರಮಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು. ಚಿಕ್ಕತ್ತೂರು ಗ್ರಾಮದ ಹಾರಂಗಿ ಮುಖ್ಯರಸ್ತೆಯಿಂದ ದೊಡ್ಡತ್ತೂರು ಫಾರಂ ಗದ್ದೆಗೆ ಸಂಪರ್ಕ ಕಲ್ಪಿಸುವ 150 ಮೀ ಉದ್ದದ ರಸ್ತೆಯನ್ನು ಅದೇ ಗ್ರಾಮವನ್ನು ಪ್ರತಿನಿಧಿಸುವ ಮಹಿಳಾ ಜನಪ್ರತಿನಿಧಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ದೂರು ನೀಡಿದರೂ ಪಂಚಾಯತ್ ವತಿಯಿಂದ ಇದುವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ್ದ ಗ್ರಾಮಪಂಚಾಯತ್ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಪಿಡಿಒ ಸಂತೋಷ್ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಸುಮಾರು 30 ಕುಟುಂಬಗಳು ವಾಸವಿರುವ ಪ್ರದೇಶಕ್ಕೆ ತೆರಳುವ ರಸ್ತೆ ಬದಿ ಜನಪ್ರತಿನಿದಿಯ ಜಮೀನಿದ್ದು 150 ಮೀ ಉದ್ದಕ್ಕೆ ಸುಮಾರು 10 ಅಡಿಗಳಷ್ಟು ಜಾಗ ಅತಿಕ್ರಮಿಸಿ ಬೇಲಿ ಅಳವಡಿಸಿಕೊಂಡಿದ್ದಾರೆ. ಇದರಿಂದ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರಾದ ಎಂ.ಬಿ.ಹರ್ಷ, ಎನ್. ರಾಮೇಗೌಡ, ದಿಲೀಪ್ ಕುಮಾರ್, ಸಿ.ಎಚ್.ಮಂಜು, ಸಚಿನ್, ರಮೀಜ್ ಅಹಮ್ಮದ್, ಚಂದ್ರು, ಲಕ್ಷ್ಮೀ, ಅಜಯ್, ಮೀನಾಕ್ಷಿ, ಪುಟ್ಟೇಗೌಡ, ರಾಧಾ, ಉದಯಕುಮಾರ್ ಮತ್ತಿತರು ಆರೋಪಿಸಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷ ಮತ್ತು ರಾಮೇಗೌಡ, ಹಲವು ಬಾರಿ ಪಂಚಾಯತ್ ಗಮನಕ್ಕೆ ತಂದರೂ ಕೂಡ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದು ಕಳೆದ 25 ವರ್ಷಗಳ ಸಮಸ್ಯೆ. ಜನಪ್ರತಿನಿಧಿಯಿಂದ ಗ್ರಾಮಸ್ಥರಿಗೆ ತೀವ್ರ ಅನಾನುಕೂಲ ಎದುರಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಶಾಸಕರ ಸೂಚನೆಗೂ ಬೆಲೆಯಿಲ್ಲದಂತಾಗಿದೆ. ಪಂಚಾಯತ್ ಕ್ರಮ ಖಂಡಿಸಿ ಪಂಚಾಯತ್ ಮುಂದೆ ಹಾಗೂ ಮುಂಬರುವ ದಿನಗಳಲ್ಲಿ ತಹಶೀಲ್ದಾರ್ ಕಛೇರಿ ಮುಂದೆ ಅನಿರ್ದಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಮತ್ತು ಸದಸ್ಯ ದಿನೇಶ್, ಯಾವುದೋ ಒತ್ತಡಕ್ಕೆ ಮಣಿದು ತೆರವು ಕಾರ್ಯಾಚರಣೆ ನಡೆಯುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸಮಸ್ಯೆ ಇತ್ಯರ್ಥಪಡಿಸಲು ಸಮಿತಿಯೊಂದನ್ನು ರಚಿಸಿ ನ್ಯಾಯ ಒದಗಿಸುವುದಾಗಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದರೂ ಅದು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಹೋರಾಟಕ್ಕೆ ಸಹಕಾರ ಕೋರಿರುವ ಗ್ರಾಮಸ್ಥರ ಪರವಾಗಿ ಈ ಭಾಗದ ಇತರೆ ಮೂವರು ಸದಸ್ಯರು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮಪಂಚಾಯತ್ ನ ಚಿಕ್ಕತ್ತೂರು ಭಾಗದ ಸದಸ್ಯರಾದ ಭಾಗ್ಯ, ಖತೀಜಮ್ಮ, ಹಾರಂಗಿ ಭಾಗದ ಸದಸ್ಯ ಮಣಿಕಂಠ, ತಾಪಂ ಮಾಜಿ ಸದಸ್ಯ ಗಣೇಶ್, ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷ ಗುಜೇಂದ್ರ, ಮಾಜಿ ಸದಸ್ಯ ಕುಮಾರಸ್ವಾಮಿ ಮತ್ತಿತರರು ಇದ್ದರು.
Back to top button
error: Content is protected !!