ಕುಶಾಲನಗರ, ಫೆ 17: ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಟ್ರಾಫಿಕ್ ಪೊಲೀಸರ ವಿರುದ್ದ ಸದಸ್ಯರು ಆಕ್ರೋಷ ವ್ಯಕ್ತಪಡಿಸಿದರು. ಟ್ರಾಫಿಕ್ ಪೊಲೀಸರ ಕಿರುಕುಳ ಹೆಚ್ಚಾಗಿದೆ. ಇದರಿಂದ ವ್ಯಾಪಾರ ವಹಿವಾಟುಗಳ ಕುಂಠಿತಗೊಂಡಿವೆ. ಟ್ರಾಫಿಕ್ ಪೊಲೀಸ್ ಠಾಣೆ ಕುಶಾಲನಗರಕ್ಕೆ ಬೇಡ ಎಂದು ಸದಸ್ಯರಾದ ಕೆ.ಜಿ.ಮನು, ಶೇಖ್ ಖಲೀಮುಲ್ಲಾ, ಜಗದೀಶ್, ಜಯಲಕ್ಷ್ಮಿ, ಪ್ರಮೋದ್‌ಮುತ್ತಪ್ಪ, ರೇಣುಕಾ ಮತ್ತಿತರರು ವಿರೋಧಿಸಿದರು. ಟ್ರಾಫಿಕ್ ಠಾಣೆ ತೆರವುಗೊಳಿಸಲು ನಿರ್ಣಯ ಮಾಡಿ ಕಳುಹಿಸುವಂತೆ ಸದಸ್ಯ ಅಮೃತ್‌ರಾಜ್ ಒತ್ತಾಯಿಸಿದರು.
ಗಾಂಜಾ, ಮದ್ಯಪಾನಿಗಳ ಹಾವಳಿ, ಪುಂಡರ ಹಾವಳಿ, ಮಿರಿಮೀರಿದ ವೇಗದ ವಾಹನ ಚಾಲನೆಗೆ ಕಡಿವಾಣ ಹಾಕುವಂತೆ ಸದಸ್ಯರಾದ ರೇಣುಕಾ, ಶೇಖ್ ಖಲೀಮುಲ್ಲಾ, ಪ್ರಮೋದ್ ಮುತ್ತಪ್ಪ ಅವರು ಸಭೆಯಲ್ಲಿ ಸಹಾಯಕ ಠಾಣಾಧಿಕಾರಿ ಗೋಪಾಲ್ ಅವರನ್ನು ಆಗ್ರಹಿಸಿದರು.
ಕ್ರೀಡಾಕೂಟಕ್ಕೆ ಧ್ವನಿವರ್ಧಕ ಅನುಮತಿಗೆ ಪೊಲೀಸ್ ಠಾಣೆಗೆ ಸಂಪರ್ಕಿಸಿದರೆ ಸಕಾಲದಲ್ಲಿ ಸ್ಪಂದಿಸುವುದಿಲ್ಲ. ಇದಲ್ಲದೆ ಲಂಚದ ಬೇಡಿಕೆ ಕೂಡ ಇಡುತ್ತಿದ್ದಾರೆ ಎಂದು ಸದಸ್ಯ ಬಿ.ಎಲ್.ಜಗದೀಶ್ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ವಿ.ಎಸ್.ಆನಂದಕುಮಾರ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಂದೋಬಸ್ತ್ ನೀಡುವುದು ಮಾತ್ರ ಪೊಲೀಸರ ಕೆಲಸ. ಇವರಿಂದ ಉಂಟಾಗುತ್ತಿರುವ ಅನಾನುಕೂಲಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲು ಸೂಚಿಸಿದರು.
ಚೆಸ್ಕಾಂ ಕಡೆಯಿಂದ ಜನಪ್ರತಿನಿಧಿಗಳ ಅಗತ್ಯ ಬೇಡಿಕೆ ಕಾಮಗಾರಿಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಸಭೆಯಲ್ಲಿದ್ದ ಚೆಸ್ಕಾಂ ಅಧಿಕಾರಿಗಳ ವಿರುದ್ದ ಸದಸ್ಯರು ಹರಿಹಾಯ್ದರು.
ನಗರ ಯೋಜನಾ ಪ್ರಾಧಿಕಾರದಲ್ಲಿ ಕೂಡ ಜನಸಾಮಾನ್ಯರ ಕೆಲಸಗಳು ಸಕಾಲದಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದ ಸದಸ್ಯ ಪ್ರಮೋದ್ ಮುತ್ತಪ್ಪ ಈ ಬಗ್ಗೆ ವಿಶೇಷ ಸಭೆ ಕರೆದು ಚರ್ಚಿಸಲು ಸಲಹೆ ನೀಡಿದರು.
ಪ್ರತಿಭಟನೆ: ಪುರಸಭೆ ವ್ಯಾಪ್ತಿಯ ಬದ್ರುನ್ನಿಸಾ ಬಡಾವಣೆಯಲ್ಲಿ ಪಾರ್ಕ್ ಮಾರಾಟವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆದು ಒಂದು ತಿಂಗಳು ಕಳೆದರೂ ಸಂಬಂಧಿಸಿದ ಪಾರ್ಕ್ ಜಾಗಕ್ಕೆ ಬೇಲಿ ಅಳವಡಿಸಲು ಇದುವರೆಗೆ ಕ್ರಮಕೈಗೊಳ್ಳದ ಮುಖ್ಯಾಧಿಕಾರಿ, ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭೆ ಬಾವಿಗಿಳಿಸಿ ಪ್ರತಿಭಟಿಸಿದರು. ಈ ಕೂಡಲೆ ಬೇಲಿ ಅಳವಡಿಕೆಗೆ ಕ್ರಮಕೈಗೊಳ್ಳುವಂತೆ ಪಟ್ಟು ಹಿಡಿದ ಘಟನೆ ನಡೆಯಿತು.
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ಸದಸ್ಯ ಬಿ.ಎಲ್.ಜಗದೀಶ್ ಈ ಬಗ್ಗೆ ಮಾಹಿತಿ ಬಯಸಿದರು. ಹಲ್ಲೆ ನಡೆದರೂ ಯಾವುದೇ ಕ್ರಮಕ್ಕೆ ಮುಂದಾಗದ ಮುಖ್ಯಾಧಿಕಾರಿ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರಮೋದ್ ಮುತ್ತಪ್ಪ ಕೂಡ ಈ ಘಟನೆ ಇಡೀ ಪುರಸಭೆಗೆ ಕಪ್ಪುಚುಕ್ಕೆ. ಇಂತಹ ಅಧಿಕಾರಿಗಳಿಂದ ಅಭಿವೃದ್ಧಿ ಹೇಗೆ ಸಾಧ್ಯ, ಸಿಬ್ಬಂದಿಗಳ ರಕ್ಷಣೆ, ಊರಿನ ಆಸ್ತಿಪಾಸ್ತಿ ರಕ್ಷಣೆ ಹೇಗೆ ನಿರೀಕ್ಷಿಸುವುದು ಎಂದರು. ಈ ಆರೋಪದ ಬಗ್ಗೆ ಸದಸ್ಯ ಕೆ.ಜಿ.ಮನು, ಶಂಭುಲಿಂಗಪ್ಪ ವಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶಿವಪ್ಪನಾಯಕ್, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ವೈಯಕ್ತಿಕ ವಿಚಾರಕ್ಕೆ ನಡೆದಿದೆ ಹೊರತು ಪುರಸಭೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುರಯ್ಯಭಾನು, ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ ಬಾಬು ಸೇರಿದಂತೆ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಇದ್ದರು.
Back to top button
error: Content is protected !!