ಕುಶಾಲನಗರ, ಜ 19: ಕುಶಾಲನಗರದ ಸರಕಾರಿ ಪಪೂ ಕಾಲೇಜು ಬಳಕೆಗೆ ಮೀಸಲಿರಿಸಿದ್ದ ಸರಕಾರಿ ಜಾಗವನ್ನು ಖಾಸಗಿ ಲೇಔಟ್ ಮಾಲೀಕ ಅತಿಕ್ರಮಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದ್ದಾರೆ.
ಕಾಲೇಜು ಆವರಕ್ಕೆ ಹೊಂದಿಕೊಂಡಂತೆ ಇರುವ ಲೇಔಟ್ ನ ಮಾಲೀಕ ಸರಕಾರಿ ಜಾಗದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ವಿ.ಪಿ.ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುಂದರೇಶ್, ಪಪಂ ಮಾಜಿ ಸದಸ್ಯ ಜೋಸೆಫ್ ವಿಕ್ಟರ್ ಸೋನ್ಸ್ ಅವರು ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲೇಔಟ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಶಿವಪ್ಪನಾಯಕ್ ಅವರು, ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಪಿ.ಶಶಿಧರ್, ಕುಶಾಲನಗರದಲ್ಲಿ ಸರಕಾರಿ ಭೂಮಿಗಳ ಸಂರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿದ್ದರೂ ಮೇಲಿಂದ ಮೇಲೆ ಜಾಗ ಕಬಳಿಕೆ ನಡೆಯುತ್ತಲೇ ಇದೆ. ಸರಕಾರಿ ಜಾಗ ಉಳ್ಳವರ ಪಾಲಾಗಬಾರದು.
ತಾನು ಜಿಪಂ ಸದಸ್ಯನಾಗಿದ್ದ ಸಂದರ್ಭ ಈ ಸರಕಾರಿ ಜಾಗ ಸದರಿ ಪ್ರೌಢಶಾಲೆ ಮತ್ತೆ ಕಾಲೇಜು ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಖುದ್ದು ಶಾಸಕ ಅಪ್ಪಚ್ಚುರಂಜನ್ ಅವರ ಜೊತೆಗೂಡಿ ಸರಕಾರಿ ಜಾಗಕ್ಕೆ ಬೇಲಿ ಅಳವಡಿಸುವ ಕಾರ್ಯ ಮಾಡಲಾಗಿತ್ತು. ಇದೀಗ ಲೇಔಟ್ ಮಾಲೀಕ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಬಂಡಿರಸ್ತೆ ಪರಿಕಲ್ಪನೆ ಹುಟ್ಟುಹಾಕಿ ನಿರ್ಮಾಣ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಸರಕಾರಿ ಜಾಗ ಕಬಳಿಸಿ ನಿವೇಶನ ಮಾಡುವ ಹುನ್ನಾರ ನಡೆದಿದೆ.
ಈ ಬಗ್ಗೆ ಸ್ವತಃ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಆಕ್ಷೇಪಣೆ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರು ಕೂಡ ಈ ಬಗ್ಗೆ ಮೌನವಹಿಸದೆ ಜಾಗ ಸಂರಕ್ಷಣೆಗೆ ಮುಂದಾಗಬೇಕು. ಕಾಮಗಾರಿ ಉದ್ದೇಶಕ್ಕೆ ಬೃಹತ್ ಮರ ಕೂಡ ತೆರವುಗೊಳಿಸಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳ ಪರಿಶೀಲಿಸಬೇಕಿದೆ. ಲೇಔಟ್ ಜಾಗದ ಬಗ್ಗೆ ಸರ್ವೆ ನಡೆಯುವುದು ಅಗತ್ಯವಿದೆ ಎಂದು ಶಶಿಧರ್ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಲೇಔಟ್ ಮಾಲೀಕ ಸುರೇಶ್, ತಾನು ಸರಕಾರಿ ಭೂಮಿ ಅತಿಕ್ರಮಿಸಿಲ್ಲ, ಕಬಳಿಕೆಗೆ ಕೂಡ ಮುಂದಾಗಿಲ್ಲ. ಶಾಲಾ ಕಟ್ಟಕ್ಕೆ ಹಾನಿಯಾಗದಂತೆ ಮಣ್ಣಿನ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಅರಣ್ಯಾಧಿಕಾರಿಗಳ ಅನುಮತಿ ಪಡೆದೇ ಮರ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
Back to top button
error: Content is protected !!