ಆರೋಪ
ಅಧಿಕಾರಿ ಮೇಲೆ ಹಲ್ಲೆ ಪ್ರಕರಣ: 18 ಮಂದಿ ಜನಪ್ರತಿನಿಧಿಗಳ ಮೌನ, ಒಬ್ಬರಿಂದ ಖಂಡನೆ
ಸೂಕ್ತ ತನಿಖೆ ನಡೆಸಿ ಅಧಿಕಾರಿ, ಜನಪ್ರತಿನಿಧಿಗಳಿಗೆ ರಕ್ಷಣೆ ನೀಡಲು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಆಗ್ರಹ
ಕುಶಾಲನಗರ, ಜ 14:ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆದಿದ್ದು ಮುಖ್ಯಾಧಿಕಾರಿ ಮಾತ್ರ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಹುಣಸೂರು ನಿವಾಸದಲ್ಲಿ ಮುಖ್ಯಾಧಿಕಾರಿ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಡೆವಲಪರ್ ಒಬ್ಬರು ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ನಡೆಸಿದ್ದು ಈ ಸಂದರ್ಭ ಇವರ ಜೊತೆ ಪುರಸಭೆ ಮಹಿಳಾ ಜನಪ್ರತಿನಿಧಿ ಕೂಡ ಸಾಥ್ ನೀಡಿದ್ದಾರೆ ಎಂಬ ವಿಚಾರ ಜಗ್ಗಜಾಹಿರಾಗಿದೆ. ಆದರೆ ಮುಖ್ಯಾಧಿಕಾರಿ ಅವರು ಮಾತ್ರ ಎಲ್ಲೂ ಕೂಡ ಈ ಬಗ್ಗೆ ಬಹಿರಂಗಪಡಿಸುವುದಾಗಲಿ ಪೊಲೀಸ್ ದೂರು ನೀಡುವುದಾಗಲಿ ಮಾಡಿಲ್ಲ.
ವಿಚಾರ ತಿಳಿಯುತ್ತಿದ್ದಂತೆ ಪುರಸಭೆ ಆಡಳಿತ ಮಂಡಳಿ ಅಧ್ಯಕ್ಷರಾದಿಯಾಗಿ ಜನಪ್ರತಿನಿಧಿಗಳು, ಸಿಬ್ಬಂದಿಗಳು ಹುಣಸೂರಿಗೆ ಭೇಟಿ ನೀಡಿ ಕುಶಲ ವಿಚಾರಿಸಿ ಬಂದಿದ್ದಾರೆ. ಮುಖ್ಯಾಧಿಕಾರಿಗಳು ದೂರು ನೀಡಲು ಹಿಂದೇಟು ಹಾಕುತ್ತಿರುವ ಕಾರಣ ಯಾರೊಬ್ಬರೂ ಕೂಡ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ.
ಅನಧಿಕೃತ ಬಡಾವಣೆ ವಿಚಾರಕ್ಕೆ ಹಲ್ಲೆ: ಕುಶಾಲನಗರದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಕ್ಯಾರವನ್ ಹೆಸರಿನ ಬಡಾವಣೆ ವಿಚಾರವಾಗಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಅನಧಿಕೃತ ಬಡಾವಣೆ ಅಧಿಕೃತಗೊಳಿಸಲು ಇಟ್ಟ ಬೇಡಿಕೆ ಈಡೇರದ ಕಾರಣ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದೇ ಬಡಾವಣೆ ವಿರುದ್ದ ಹೋರಾಟ ನಡೆಸುತ್ತಿದ್ದ ಪುರಸಭೆ ಸದಸ್ಯ ಅಮೃತ್ ರಾಜ್ ಅವರು ಕೂಡ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಬಹಿರಂಗವಾಗಿ ವಿಷಯ ಪ್ರಸ್ತಾಪಿಸಿದ್ದರು. ಇದರ ಮುಂದುವರೆದ ಭಾಗವಾಗಿ ಈ ಹಲ್ಲೆ ಪ್ರಕರಣ ನಡೆದಿರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಜವಾಬ್ದಾರಿಯುತ ಅಧಿಕಾರಿ ಮೇಲಿನ ದೌರ್ಜನ್ಯ ದ ಬಗ್ಗೆ ತೀವ್ರ ಚರ್ಚೆಗಳು ನಡೆದರೂ ಕೂಡ ಸ್ವತಃ ಆ ಅಧಿಕಾರಿ ಇದನ್ನು ನಿರಾಕರಿಸಿದ ಕಾರಣ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣದಾಗಿದೆ.
ಖಂಡನೆ: ಮುಖ್ಯಾಧಿಕಾರಿ ಮೇಲಿನ ಹಲ್ಲೆ ಪ್ರಕರಣವನ್ನು ಪುರಸಭೆ ಸದಸ್ಯ ಬಿ.ಎಲ್.ಜಗದೀಶ್ ಖಂಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಗದೀಶ್, ವಿಚಾರ ತಿಳಿಯುತ್ತಿದ್ದಂತೆ ಅವರ ನಿವಾಸಕ್ಕೆ ತೆರಳಿ ಪರಿಶೀಲಿಸಲಾಗಿ ಅಧಿಕಾರಿಗೆ ಬಲವಾದ ಪೆಟ್ಟು ಬಿದ್ದಿರುವುದು ಕಂಡುಬಂದಿದೆ. ಯಾವುದೋ ಒತ್ತಡಕ್ಕೆ ಮಣಿದು ಅಧಿಕಾರಿ ಇದುವರೆಗೆ ಲಿಖಿತ ದೂರು ನೀಡಿಲ್ಲ. ಈ ಪ್ರಕರಣ ಪುರಸಭೆಗೆ ಒಂದು ಕಪ್ಪುಚುಕ್ಕಿ ಇದ್ದಂತೆ. ಇದರ ಹಿಂದೆ ಭೂಮಾಫಿಯಾ ಅಡಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಗೂಂಡಾ ಶಕ್ತಿಗಳಿಂದ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಜಗದೀಶ್ ಈ ಮೂಲಕ ಆಗ್ರಹಿಸಿದ್ದಾರೆ.