ಕುಶಾಲನಗರ, ಜ 04: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿ ಕಾಫಿ ಘಟಕದವರು ಕೆರೆ ಜಾಗಕ್ಕೆ ಮಣ್ಣು ತುಂಬುತ್ತಿರುವ ಆರೋಪದ ಮೇರೆಗೆ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೆರೆ ತಟದಲ್ಲಿ ಖಾಸಗಿ ಕಾಫಿ ಘಟಕಕ್ಕೆ ಸಂಬಂಧಿಸಿದ ಜಾಗವಿದ್ದು ಕೆರೆಯಂಚಿಗೆ ಲೋಡ್ ಗಟ್ಟಲೆ ಮಣ್ಣು ತಂದು ತುಂಬಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಒತ್ತುವರಿ ಆರೋಪ ಮಾಡಿದ ಬೆನ್ನಲ್ಲೇ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಪಿಡಿಒ ಸಂತೋಷ್, ಸದಸ್ಯರಾದ ಫಿಲೋಮಿನ, ಚಂದ್ರು, ಗೌರಮ್ಮ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳಕ್ಕೆ ಆಗಮಿಸಿದ ಕಾಫಿ ಘಟಕದ ವ್ಯವಸ್ಥಾಪಕರಲ್ಲಿ ಸಮಜಾಯಿಷಿಕೆ ಬಯಸಿದರು. ಮಣ್ಣು ಸಾಗಿಸಲು ಗ್ರಾಪಂ ನಿಂದ ಅನುಮತಿ ಪಡೆದುಕೊಳ್ಳದ ಬಗ್ಗೆ ಆಕ್ಷೇಪಿಸಿದ ಜನಪ್ರತಿನಿಧಿಗಳು ಖಾಸಗಿ ಜಾಗ ಸುತ್ತಳತೆ ಪ್ರದೇಶ ಸರ್ವೆ ನಡೆಸಿದ ಬಳಿಕ ಕಾಮಗಾರಿ ಮುಂದುವರೆಸಲು ಸೂಚನೆ ನೀಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಮತ್ತು ಪಿಡಿಒ ಸಂತೋಷ್, ಕಾಫಿ ಘಟಕದವರು ತಮಗೆ ಸೇರಿದ ಜಾಗ ಸಮತಟ್ಟು ಮಾಡಲು ಮಣ್ಣು ಹಾಕುತ್ತಿರುವುದಾಗಿ ತಿಳಿಸಿದ್ದು ಈ ಬಗ್ಗೆ ಈಗಾಗಲೆ ತಹಶೀಲ್ದಾರ್ ಗಮನಕ್ಕೆ ತರಲಾಗಿದೆ. ಸಧ್ಯಕ್ಕೆ ಯಾವುದೇ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ. ಖಾಸಗಿಯವರಿಗೆ ಸೇರಿದ ಜಾಗ ಸರ್ವೆ ನಡೆಸಿ ಪರಿಶೀಲಿಸಲಾಗುವುದು. ಕೆರೆ ಪ್ರದೇಶಕ್ಕೆ ಮಣ್ಣು ತುಂಬಿರುವುದು ಪತ್ತೆಯಾದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಕಾಫಿ ಘಟಕ ವ್ಯವಸ್ಥಾಪಕ ಕುಮಾರ್, ಗ್ರಾಮಸ್ಥರಾದ ವರದ, ಪ್ರವೀಣ್, ರವಿ, ಮುಕೇಶ್, ಕನಕ ಮತ್ತಿತರರು ಇದ್ದರು.
Back to top button
error: Content is protected !!