ಕುಶಾಲನಗರ, ಡಿ 27: ಕುಶಾಲನಗರದ ಮಹಾಕಾಳಿ ಖ್ಯಾತಿಯ ಮುಬೀನ್ ತಾಜ್ (38) ನಿಧನರಾದರು. ಖಾಸಗಿ ವಿದ್ಯಾಸಂಸ್ಥೆ ಮುಖ್ಯಸ್ಥೆಯಾಗಿದ್ದ ಸೋಮವಾರಪೇಟೆಯ ಮುಬೀನ್ ತಾಜ್ ಮಹಾಕಾಳಿ ಆವಾಹನೆಯಾಗಿದೆ, ದೇವಾಲಯ ನಿರ್ಮಿಸಬೇಕಿದೆ ಎಂದು ಹೋರಾಟ ನಡೆಸುತ್ತಿದ್ದರು. ಕುಶಾಲನಗರದ ಬಿಎಂ ರಸ್ತೆ ಹಳೆಯ ವೆಂಕಟೇಶ್ವರ ಥಿಯೇಟರ್ ಬಳಿ ವಾಸವಿದ್ದ ಇವರು ಕುಶಾಲನಗರ ಪುರಸಭೆ ಬಳಿಯಿರುವ ಖಾಸಗಿ ಜಾಗದಲ್ಲಿ ದೇವರ ವಿಗ್ರಹಗಳು ಹುದುಗಿದ್ದು ಇದನ್ನು ಹೊರತೆಗೆಯಬೇಕು ಎಂದು ಹೋರಾಟ ನಡೆಸುತ್ತಿದ್ದರು. ಕಾಳಿ ತನ್ನ ಕನಸಿನಲ್ಲಿ ಬಂದು ಆಜ್ಞಾಪಿಸುತ್ತಿದ್ದಾಳೆ ಎಂದು ಹೇಳುತ್ತಲೇ ಬಂದಿದ್ದ ಮುಬೀನ್ ತಾಜ್ ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಕಾನೂನಾತ್ಮಕವಾಗಿ ಇವರ ಬಯಕೆ ಕೂಡ ಈಡೇರಿಸಲು ಯಾರಿಗೂ ಸಾಧ್ಯವಿರಲಿಲ್ಲ.
ಮೂಲತಃ ಇಸ್ಲಾಂ ಧರ್ಮದ ಅವಿವಾಹಿತೆ ಮುಬೀನ್ ತಾಜ್ ಕಳೆದ 7-8 ವರ್ಷಗಳಿಂದ ಸಂಪೂರ್ಣ ಹಿಂದೂ ರೀತಿಯಲ್ಲಿ ಜೀವನ ನಡೆಸುತ್ತಿದ್ದರು. ತಾನು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆ ಕೈ ತಪ್ಪಿ ಹೋದಾಗಿನಿಂದ ಇವರು ಮಾನಸಿಕವಾಗಿ ಅಸಮತೋಲನಕ್ಕೆ ಒಳಗಾಗಿದ್ದರು.
ನಿರಂತರ ಹೋರಾಟಕ್ಕೆ ಸಿಗದ ಸ್ಪಂದನೆಯಿಂದ ಮಾನಸಿಕವಾಗಿ ಜರ್ಜರಿತರಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಮುಬೀನ್ ತಾಜ್ ಮಂಗಳವಾರ ನಿಧನರಾದರು. ಮನೆಯ ಬಾಗಿಲು ತೆಗೆಯದ ಕಾರಣ ಬಾಡಿಗೆ ಮನೆ ಮಾಲೀಕರು ಬಾಗಿಲು ಒಡೆದು ಒಳನೋಡಿದಾಗ ಮುಬೀನ್ ತಾಜ್ ಇಹಲೋಕ ತ್ಯಜಿಸಿದ್ದರು.
ಖಾಸಗಿ ಭೂಮಿಯೊಳಗೆ ದೇವರ ವಿಗ್ರಹವಿದೆ ಎಂಬ ಗೊಂದಲಕ್ಕೆ ಕೊನೆಗೂ ಉತ್ತರ ಸಿಗದಾಯಿತು.
Back to top button
error: Content is protected !!