ಕುಶಾಲನಗರ, ಸೆ 17: ಸೋಮವಾರಪೇಟೆ ತಾಲೂಕು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ಶಿಶು ಅಭಿವೃದ್ಧಿ ಯೋಜನೆಯಡಿ
ಕುಶಾಲನಗರದಲ್ಲಿ ಆರಂಭಗೊಂಡ ಶಿಶುಪಾಲನಾ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ಕುಶಾಲನಗರದ ಜಿಎಂಪಿ ಶಾಲೆ ಬಳಿಯ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಕೇಂದ್ರದಲ್ಲಿ ಹಾಲು ಉಕ್ಕಿಸಿದ ಶಾಸಕರು ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನದಲ್ಲಿ ಶಿಶು ಪಾಲನಾ ಕೇಂದ್ರ ಆರಂಭಗೊಂಡಿರುವುದು ಸಂತಸ ತಂದಿದೆ.ಮೋದಿ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ವೃದ್ದಾಶ್ರಮಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸರಕಾರಿ, ಅರೆ ಸರಕಾರಿ ಉದ್ಯೋಗಿಗಳ ಪುಟ್ಟ ಮಕ್ಕಳ ಪಾಲನೆಗೆ ನೆರವಾಗಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದರು.
ಸ್ತ್ರೀ ಶಕ್ತಿ ಒಕ್ಕೂಟದ ನಿರಂತರ ಬೇಡಿಕೆ ಹಿನ್ನಲೆಯಲ್ಲಿ ಇಂತಹ ಸೇವಾ ಯೋಜನೆ ಸ್ತ್ರೀ ಶಕ್ತಿ ಒಕ್ಕೂಟದ ಪಾಲಾಗಲು ಸಾಧ್ಯವಾಯಿತು ಎಂದು ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ರೆಹನಾ ಫಿರೋಜ್ ತಿಳಿಸಿದರು.
ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದಿಂದ ನಿರ್ವಹಣೆಗೊಳ್ಳುವ ಕೇಂದ್ರದ ಯೋಜನೆ ಅನುಷ್ಠಾನದ ಬಗ್ಗೆ ಶಿಶು ಅಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಅಣ್ಣಯ್ಯ ಮಾಹಿತಿ ಒದಗಿಸಿದರು.
ಈ ಸಂದರ್ಭ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯ ವಿ.ಎಸ್.ಆನಂದಕುಮಾರ್, ಸ್ತ್ರೀ ಶಕ್ತಿ ಒಕ್ಕೂಟದ ತಾಲೂಕು ಘಟಕದ ಪ್ರಮುಖರಾದ ಎನ್.ಕೆ.ಸುಮತಿ, ಯಶೋಧ, ಹೇಮಲತಾ, ಕುಶಾಲನಗರ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಸುನಿಲ್ ಮತ್ತಿತರರು ಇದ್ದರು.
Back to top button
error: Content is protected !!