ಕುಶಾಲನಗರ, ಸೆ 15: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಪಂ ವ್ಯಾಪ್ತಿಯ ಮರಡಿಯೂರು ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯಿಂದ ಗ್ರಾಮಸ್ಥರು ಸಂಕಟ ಅನುಭವಿಸುವಂತಾಗಿದೆ. ಗ್ರಾಮದ ಮೂಲಕ ರೈತರ ಜಮೀನಿಗೆ ಸಂಪರ್ಕ ಕಲ್ಪಿಸುವ 1 ಕಿಮಿ ರಸ್ತೆ ಮೊದಲೇ ಒತ್ತುವರಿಯಾಗಿರುವುದು ಒಂದೆಡೆಯಾದರೆ ಈಗಿರುವ ಕಿರಿದಾದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಬರೀ ಗುಂಡಿಗಳಿಂದ ತುಂಬಿರುವ ರಸ್ತೆ ಕೆಸರುಮಯವಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಕಾರು, ಜೀಪ್, ಟ್ರಾಕ್ಟರ್, ಆಟೋಗಳು ಈ ಮಾರ್ಗದಲ್ಲಿ ಸಂಚಾರ ಅಸಾಧ್ಯ. ಎಚ್ಚರ ತಪ್ಪಿದರೆ ಕೆಸರಿನಲ್ಲಿ ಸಿಲುಕುವ ವಾಹನಗಳನ್ನು ಮೇಲೆತ್ತಲು ಕ್ರೇನ್ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ಸುಮ, ಸ್ಟೆನ್ಸನ್, ರಾಕೇಶ್, ರವಿ ಮತ್ತು ಮಣಿಕಂಠ ಎಂಬವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ದ್ವಿಚಕ್ರ ವಾಹನ ಮಾತ್ರ ಬಳಸಿ ಸರ್ಕಸ್ ಮಾಡುತ್ತ ಈ ರಸ್ತೆ ದಾಟಬೇಕಿದೆ. ಆಯತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕು. ಈಗಾಗಲೆ ಬಹುತೇಕ ಮಂದಿ ಎದ್ದು ಬಿದ್ದ ಮೂಳೆ ಮುರಿದುಕೊಂಡಿದ್ದಾರೆ. 33 ಅಡಿ ರಸ್ತೆಯನ್ನು ಎರಡೂ ಭಾಗದಲ್ಲಿ ರೈತರು ಒತ್ತುವರಿ ಮಾಡಿಕೊಂಡಿದ್ದು ಇದೀಗ 12 ಅಡಿ ಮಾತ್ರ ರಸ್ತೆಯಾಗಿ ಉಳಿದುಕೊಂಡಿದೆ. ಒತ್ತುವರಿ ಬಿಡಿಸದೆ ಗ್ರಾಪಂ ಮೂಲಕ ರಸ್ತೆ ಅಭಿವೃದ್ಧಿ ಅಸಾಧ್ಯ ಎಂಬ ಉತ್ತರ ಲಭಿಸಿದೆ ಎಂದು ತಿಳಿಸಿದರು. ಕಳೆದ 25 ವರ್ಷಗಳಿಂದ ಇದೇ ದುಸ್ಥಿತಿಯಲ್ಲಿರುವ ರಸ್ತೆ ಸಮಸ್ಯೆಗೆ ತಾಲೂಕು ಆಡಳಿತ ಮುಕ್ತಿ ಕಲ್ಪಿಸುವಂತೆ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆವರ್ತಿ ಗ್ರಾಪಂ ಅಧ್ಯಕ್ಷ ಎಂ.ಕೆ.ಶಿವ ಅವರು, ರಸ್ತೆ ಒತ್ತುವರಿ ತೆರವುಗೊಂಡಲ್ಲಿ ಪಂಚಾಯ್ತಿ ಮೂಲಕ ರಸ್ತೆ ಅಭಿವೃದ್ದಿಗೆ ಮುಂದಾಗಲಾಗುವುದು. ಸೂಕ್ತ ಸರ್ವೆಗೆ ಆಗ್ರಹಿಸಿ ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಒತ್ತುವರಿ ಬಿಟ್ಟುಕೊಡಲು ರೈತರು ಸಿದ್ದವಿದ್ದರು ಸಮರ್ಪಕ ಸರ್ವೆ ನಡೆಯದೆ ವಿಳಂಭ ಉಂಟಾಗಿದೆ. ಕೂಡಲೆ ಸರ್ವೆ ನಡೆಸಿದಲ್ಲಿ ಎರಡೂ ಬದಿ ಚರಂಡಿ ನಿರ್ಮಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
Back to top button
error: Content is protected !!