ಕುಶಾಲನಗರ, ಫೆ. 04: ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರವಿರುವ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ವಿವಿಧ ಬಗೆಯ ಕೈಗಾರಿಕಾ ಘಟಕಗಳು ಮತ್ತು ಅನೇಕ ಕಾಫಿ ಸಂಸ್ಕರಣಾ ಘಟಕಗಳು ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ.ಆದರೆ ಕೆಲವು ಕಾಫಿ ಸಂಸ್ಕರಣಾ ಕೇಂದ್ರದಿಂದ ಕಾಫಿ ಸಂಸ್ಕರಣಾ ಸಂಧರ್ಭದಲ್ಲಿ ಹೊರ ಸೂಸುವ ದೂಳು ಮಾದರಿಯ ಹೊಗೆಯಿಂದ ಕೂಡ್ಲೂರು ಕೈಗಾರಿಕಾ ಕೇಂದ್ರ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯವಾಗುತ್ತಿದೆ.
ಘಟಕದವರಿಗೆ ಇಲಾಖೆಯ ನಿಯಮಾನುಸಾರ ಕೇಂದ್ರದ ಒಳಗೆ ದೂಳು ಸಂಗ್ರಹ ಮಾಡುವಂತಹ ನಿಯಮವಿದ್ದರೂ ಸಹ ಹೊರಗಡೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಹಾಳಾಗುವುದರ ಜೊತೆಯಲ್ಲಿ ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ.
ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಸಂಜೆ 6 ಗಂಟೆಯ ಸಮಯದಲ್ಲಿ ಕೆಲವು ಕಾಫಿ ಸಂಸ್ಕರಣಾ ಘಟಕದವರು ಘಟಕದಿಂದ ದೂಳನ್ನು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ವಾಯು ಮಾಲಿನ್ಯವಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ದೂಳು ಹರಡಿ ಸಾರ್ವಜನಿಕರಿಗೆ ಮತ್ತು ವಯೋವೃದ್ಧರಿಗೆ ಅಸ್ತಮಾ ರೋಗ ಸೇರಿದಂತೆ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪವಿದೆ.
ಕೈಗಾರಿಕಾ ಕೇಂದ್ರದ ಸಮೀಪದಲ್ಲಿರುವ ಅನೇಕ ಗ್ರಾಮಗಳಿಗೆ ಸಂಜೆ ಸಮಯದಲ್ಲಿ ಉತ್ತಮ ಗಾಳಿಯ ಬದಲು ದೂಳುಮಯವಾದ ಗಾಳಿಯನ್ನು ಸೇವನೆ ಮಾಡುವಂತಹ ಪರಿಸ್ಥಿತಿ ಎದುರಾಗಿ ಅನೇಕ ಮಂದಿ ಕೆಮ್ಮು ಮತ್ತು ಆಸ್ತಮಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಸಂಬಂಧಿಸಿದ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯವರು ತುರ್ತಾಗಿ ಸ್ಧಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲು ಸಾರ್ವಜನಿಕರ ಅಗ್ರಹವಾಗಿದೆ.
Back to top button
error: Content is protected !!