ಸುದ್ದಿಗೋಷ್ಠಿ

ಏಪ್ರಿಲ್ 14 ಅಂಬೇಡ್ಕರ್ ಹುಟ್ಟುಹಬ್ಬ ಮನೆ- ಮನದ ಹಬ್ಬ

ಕುಶಾಲನಗರ, ಏ 09: ಏಪ್ರಿಲ್ 14 ಅಂಬೇಡ್ಕರ್ ಹುಟ್ಟಿದ ದಿನ. ತಂದು ಅವರ ಸಾಧನೆಗಳನ್ನು ಸ್ಮರಿಸಿ ಸಂಭ್ರಮಿಸುವ ದಿನ. ಈ ದಿನವನ್ನು ವಿಶ್ವದ ಅತ್ಯುನ್ನತ ಸಂಸ್ಥೆಯಾದ ವಿಶ್ವಸಂಸ್ಥೆ ವಿಶ್ವಜ್ಞಾನ ದಿನ ಎಂದು ಘೋಷಿಸಿ ಪ್ರತಿ ವರ್ಷ ವಿಶ್ವಸಂಸ್ಥೆಯಲ್ಲಿ ಆಚರಿಸಿ ಸಂಭ್ರಮಿಸುತಿದೆ ಎಂದು ಎ.ವಿ. ಎಸ್.ಎಸ್. ಅಧ್ಯಕ್ಷ ಹೆಚ್‌.ಬಿ. ಗಣೇಶ್ ಹೇಳಿದರು.
ಕುಶಾಲನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್. ಬಿ.ಗಣೇಶ್ ಅವರು, ಇದು ಅಂಬೇಡ್ಕರ್ ಅವರ ಅಗಾಧ ಪ್ರತಿಭೆಯ ಮೇರು ಜ್ಞಾನ, ಮಹಾ ಮಾನವೀಯ ಮೌಲ್ಯಗಳಿಗೆ ಸಂದ ಗೌರವವಾಗಿದೆ ವಿಶ್ವದ ಮತ್ತೆ ಯಾರಿಗೂ ಸಲ್ಲದ ಈ ಗೌರವವನ್ನು ವಿಶ್ವ ಸಂಸ್ಥೆ ಅವರಿಗೆ ನೀಡಿದೆ. ಈ ದೇಶದ ಕೋಟ್ಯಾನು ಕೋಟಿ ಜನರ ಬದುಕನ್ನು ಬದಲಿಸಿದ ಅಂಬೇಡ್ಕರ್ ಅವರ ಹುಟ್ಟು ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಅವರ ಮಾರ್ಗದರ್ಶನವನ್ನು ಅನುಸರಿಸುವ ಹಾದಿಯಲ್ಲಿ ನಮ್ಮ ಮನೆ ಮನಗಳಲ್ಲಿ ಮಕ್ಕಳಲ್ಲಿ ಬಂಧುಗಳಲ್ಲಿ ಅವರ ಹುಟ್ಟುಹಬ್ಬವನ್ನು ಅವರ ಆಶಯಗಳನ್ನು ಮೈಗೂಡಿಸಿಕೊಳ್ಳುವ ಸಲುವಾಗಿ ಆಚರಿಸಬೇಕಿದೆ. ನಾವು ಮಾಡುವ ಹಬ್ಬದ ಆಚರಣೆಯಿಂದ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಪ್ರತಿಯೊಬ್ಬರು ಅಂಬೇಡ್ಕರ್ ರವರನ್ನು ಗೌರವಿಸುವ ರೀತಿಯಲ್ಲಿ ಅವರ ಹುಟ್ಟು ಹಬ್ಬ ಆಚರಣೆ ಆಗಬೇಕು ಎಂದರು.
ದಲಿತ ಸಂಘರ್ಷ( ಭೀಮವಾದ) ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ. ಬಿ.ರಾಜು ಅವರು ಮಾತನಾಡಿ, ನಮ್ಮ ಊರುಕೇರಿ ಪಟ್ಟಣಗಳಲ್ಲಿ ಹಬ್ಬಕ್ಕೆ 15 ದಿನ ಮುಂಚಿತವಾಗಿ ಊರಿನ ಯಜಮಾನರು, ಸಂಘದವರು ಇತರೆ ಪ್ರಮುಖರು ಸಭೆ ಸೇರಿ ಅಂಬೇಡ್ಕರ್ ಹುಟ್ಟುಹಬ್ಬ ಆಚರಿಸುವ ಬಗ್ಗೆ ಮಾತ್ರ ಚರ್ಚಿಸಿ ಯಾವುದೇ ಭಿನ್ನಾಭಿಪ್ರಾಯಕ್ಕೂ ಎಡೆ ಮಾಡಿಕೊಡದೆ, ಮನೆ ಮನೆಗಳಲ್ಲೂ ಹಬ್ಬದ ವಾತಾವರಣ ಇರುವ ರೀತಿಯಲ್ಲಿ ಮನೆಯಂಗಳದಲ್ಲಿ ರಂಗವಲ್ಲಿಗಳ ರಚನೆಯೊಂದಿಗೆ, ಎಲ್ಲ ಜನಾಂಗಗಳ, ಎಲ್ಲಾ ವರ್ಗಗಳ ಒಮ್ಮತದಿಂದ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ. ಅಂಬೇಡ್ಕರ್ ಒಬ್ಬ ವಿಮೋಚಕ, ಮಾರ್ಗದಾತ, ದೇವರಲ್ಲ, ಅನುಸರಿಸಬೇಕಾದ ಶಕ್ತಿ, ಪೂಜನೀಯ ವ್ಯಕ್ತಿಯಲ್ಲ, ಹಣ್ಣು ಕಾಯಿ ಪೂಜೆ ಕೊಡುವ ಮೂಲಕ ಅಂಬೇಡ್ಕರ್ ಅವರನ್ನು ಯಾರಾದರೂ ದೇವರಾಗಿಸಲು ಮುಂದಾದರೆ ನಾವು ಅವರ ಮಾರ್ಗದರ್ಶನದಿಂದಲೇ ದೂರವಾಗುತ್ತೇವೆ ಎಂದು ಹೇಳಿದರು.
ಕುಶಾಲನಗರದ ಹಿರಿಯ ರಾಜಕಾರಣಿ ಹೆಚ್. ಡಿ. ಚಂದ್ರು ಅವರು ಮಾತನಾಡಿ, ಸರ್ಕಾರದ ಯಂತ್ರಾಂಗ ಈಗಾಗಲೇ ಬಾಬು ಜಗಜೀವನ್ ರಾಮ್ ಅವರ ಹುಟ್ಟುಹಬ್ಬವನ್ನು ಸರ್ಕಾರಿ ಕಾರ್ಯಕ್ರಮದ ರೀತಿಯಲ್ಲಿ ಆಚರಿಸಿದ್ದಾರೆ. ಅದೇ ರೀತಿ ಏಪ್ರಿಲ್ 14ರಂದು ಅಂಬೇಡ್ಕರ್ ಅವರ ಹುಟ್ಟು ಹಬ್ಬವನ್ನು ಕೂಡ ಆಚರಿಸುತ್ತಾರೆ. ಸರ್ಕಾರಿ ಈ ಕಾರ್ಯಕ್ರಮದ ಜೊತೆಯಲ್ಲಿ ನಾವು ಕೈಜೋಡಿಸಿ ಹಬ್ಬದ ರೀತಿಯಲ್ಲಿ ಶಿರಂಗಾಲದಿಂದ ನೆಲ್ಯ ಹುದಿಕೇರಿಯವರೆಗೆ ಬರುವ ಎಲ್ಲರನ್ನೂ, ಸಮಾಜದ ಬಗ್ಗೆ ಅಂಬೇಡ್ಕರ್ ಹೊಂದಿದ್ದ ಕಾಳಜಿ ಮತ್ತು ಆಶಯದೊಂದಿಗೆ ಸಮಾಜದ ಎಲ್ಲರನ್ನು ಜಾಗೃತಗೊಳಿಸಲಾಗುವುದು, ಯುವಜನತೆಗೆ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಮಾಜದ ಬಗ್ಗೆ ಅವರಿಗಿದ್ದ ನಿರೀಕ್ಷೆ ಎಲ್ಲವನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಕೆ.ಎಸ್.ರವಿ, ಎಸ್.ಎಸ್.ಸಂಗಮೇಶ. ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us