ಕುಶಾಲನಗರ, ಜು 23: ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಕಾಡಾನೆ ಲಗ್ಗೆಯಿಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ಅಣೆಕಟ್ಟೆ ವ್ಯಾಪ್ತಿಗೆ ಆಗಮಿಸಿ ಅಲ್ಲಿನ ಉದ್ಯಾನವನದೊಳಗೆ ಅಡ್ಡಾಡಿದೆ.
ಹಾರಂಗಿ ಗ್ರಾಮದ ಕಿರು ಸೇತುವೆ ಬಳಿಯ ಕಾವೇರಿ ದೇವಾಲಯ ಮುಂಭಾಗ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಹೊರಕ್ಕೆ ಬಂದ ಕಾಡಾನೆ ಗ್ರಾಮದೊಳಗಿನಿಂದ ಹಾದು ಸಮೀಪದ ದೊಡ್ಡತ್ತೂರು ಅರಣ್ಯ ಪ್ರದೇಶದತ್ತ ತೆರಳಿದೆ.
ಸಂಜೆ 7 ಗಂಟೆ ವೇಳೆಗೆ ನಡೆದ ಈ ಘಟನೆಯಿಂದ ಜಲಾಶಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ಕಾಡಾನೆ ಸಕಲೇಶಪುರ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಕಾರಣ ಕಳೆದ ಒಂದು ವರ್ಷದ ಹಿಂದೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಈ ಪ್ರದೇಶಕ್ಕೆ ಆನೆ ಆಗಮಿಸಿರುವ ಬಗ್ಗೆ ಅರಣ್ಯಇಲಾಖೆಗೆ ಮಾಹಿತಿ ಲಭಿಸಿತ್ತು. ಇದೀಗ ಕಾಡಾನೆ ಕೂಡಿಗೆ ಸಮೀಪದ ಬೆಂಡೆಬೆಟ್ಟ ಅರಣ್ಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು ಈ ನಿಟ್ಟಿನಲ್ಲಿ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿ ಶಿವರಾಮ್ ತಂಡ ಕಾಡಾನೆ ಪತ್ತೆಗೆ ಕ್ರಮಕೈಗೊಂಡಿದೆ.
Back to top button
error: Content is protected !!