ಕುಶಾಲನಗರ, ಡಿ 20: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಅರಾಜಕತೆ ತಾಂಡವವಾಡಿದೆ. ನ್ಯಾಯಾಲಯದಲ್ಲಿದ್ದ ರಸ್ತೆ ವಿವಾದ ತೀರ್ಮಾನಕ್ಕೆ ಬರುವ ಮುನ್ನವೇ ವ್ಯಕ್ತಿಯೊಬ್ಬರು ಮುಖ್ಯ ರಸ್ತೆಯನ್ನೇ ಅಡ್ಡಕ್ಕೆ ಬಗೆದು ಜನಜೀವನಕ್ಕೆ ತೊಂದರೆ ಉಂಟುಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ರಸ್ತೆ ವಿವಾದ ಇತ್ಯರ್ಥ ಕಾಣದ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರು ತಮಗೆ ಸೇರಿದ ಸ್ಥಳದಲ್ಲಿ ಗುಂಡಿ ತೋಡಿದ್ದಾರೆ. ತಮಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ನ್ಯಾಯಾಲಯ ಮೊರೆ ಹೋದ ಸ್ಥಳೀಯ ವ್ಯಕ್ತಿ ಇದೀಗ ಪ್ರಕರಣ ಇತ್ಯರ್ಥವಾಗದೆ ಬೇಸತ್ತು ಹಾರಂಗಿ-ಕುಶಾಲನಗರ ಮಾರ್ಗದ ಮುಖ್ಯರಸ್ತೆಯಲ್ಲಿ ತಮಗೆ ಸೇರಿದೆ ಎನ್ನಲಾದ ರಸ್ತೆ ಒಂದು ಭಾಗದಲ್ಲಿ ಟ್ರಂಚ್ ನಿರ್ಮಿಸಿದ್ದಾರೆ. ಇದರಿಂದ ರಸ್ತೆ ವಿಸ್ತೀರ್ಣ ಅರ್ಧಕ್ಕೆ ಕಡಿತವಾಗಿದೆ.
ಕಾವೇರಿ ನೀರಾವರಿ ನಿಗಮದ ದಿವ್ಯ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂಚಾರಕ್ಕೆ ಅಡ್ಡಿ ಎದುರಾಗಿದೆ. ಜವಾಬ್ದಾರಿ ತೋರಬೇಕಾದ ಅಧಿಕಾರಿಗಳಿಂದ ಪ್ರಕರಣ ಕಗ್ಗಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ಗುಂಡಿ ನಿರ್ಮಿಸಿದ ಪರಿಣಾಮ ಸುಗಮ ಸಂಚಾರ ಸ್ಥಗಿತಗೊಂಡಿದ್ದು, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಪಿಡಿಒ ಸಂತೋಷ್ ಸ್ಥಳ ಪರಿಶೀಲನೆ ನಡೆಸಿದರು.
Back to top button
error: Content is protected !!