ಸಿದ್ದಾಪುರ, ಡಿ 19 : ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಿದ ಶರಣರು ದಯೆಯನ್ನು ಧರ್ಮದ ಮೂಲವಾಗಿಸಿದರು. ಜೊತೆಗೆ ಎಲ್ಲಾ ಧರ್ಮಗಳ ಸಾರವೂ ಇದೇ ಆಗಿದೆ ಎಂದು ಸಾಹಿತಿ ಕಣಿವೆ ಭಾರಧ್ವಜ್ ಆನಂದತೀರ್ಥ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಪ್ರಾಣಿ ಪಕ್ಷಿಗಳೊಂದಿಗಿನ ಜೀವರಾಶಿಗಳು ಹಾಗೂ ಮನುಷ್ಯನ ಜೀವ ಒಂದೇ.
ಯಾವ ಕಾರಣಕ್ಕೂ ಅನಗತ್ಯವಾಗಿ ಹರಣವಾಗಬಾರದು ಎಂಬ ಸದುದ್ದೇಶದಿಂದ ಬಸವಾದಿ ಶರಣರು, ಕಲಬೇಡ ಕೊಲಬೇಡ ಎಂಬ ವಚನದ ಮೂಲಕ ಮನುಷ್ಯನ ಸುಂದರ ಬದುಕಿಗೆ ಅಗತ್ಯವಿರುವ ದೀವಿಗೆ ಹಚ್ಚಿದ್ದಾರೆ.
ಹಾಗೆಯೇ ಇಸ್ಲಾಂ, ಕ್ರೈಸ್ತ , ಬೌದ್ಧ ಮೊದಲಾದ ಎಲ್ಲಾ ಧರ್ಮಗಳು ಕೂಡ ಅದೇ ಸಂದೇಶ ಸಾರಿವೆ.
ಆದರೆ ನಾವು ಅವುಗಳನ್ನು ಅರಿಯುವಲ್ಲಿ ಹಾಗೂ ಪಾಲನೆ ಮಾಡುವಲ್ಲಿ ಎಡವಿದ್ದೇವೆ. ಹಾಗಾಗಿ ಸಂಕೋಲೆಗಳಲ್ಲಿ ಸಿಲುಕಿದ್ದೇವೆ ಎಂದು ಭಾರಧ್ವಜ್ ವಿಷಾದಿಸಿದರು.
” ಸಾಂಸ್ಕ್ರತಿಕ ನಾಯಕ ಬಸವಣ್ಣ ” ವಿಚಾರದ ಕುರಿತು ಪ್ತವಚನ ನೀಡಿದ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮೆ.ನಾ.ವೆಂಕಟನಾಯಕ್, ಹನ್ನೆರಡನೇ ಶತಮಾನದಲ್ಲಿನ ಬಸವಾದಿ ಶರಣರು ಇಡೀ ಮನು ಕುಲಕ್ಕೆ ಅಗತ್ಯವಿರುವ ಜೀವನ ಮೌಲ್ಯಗಳನ್ನು ವಚನಗಳಲ್ಲಿ ಸಾರಿ ಹೋಗಿದ್ದಾರೆ.
ಆದರೆ ಅತಿಯಾಸೆಯ ಮಾನವ ಅವುಗಳನ್ನು ಅರಿಯುವಲ್ಲಿ ವಿಫಲನಾಗಿದ್ದಾನೆ.
ಹಾಗಾಗಿ ಸಮಾಜದಲ್ಲಿ ನಿತ್ಯವೂ ಮೋಸ, ವಂಚನೆ, ದ್ವೇಷ, ದರೋಡೆ, ಕೊಲೆ – ಸುಲಿಗೆಗಳು ಘಟಿಸುತ್ತಿವೆ.
ಒಳ್ಳೆಯ ಮಾತುಗಳು, ನಡೆ ಹಾಗೂ ನುಡಿ, ಸತ್ಯ ಶುದ್ಧ ಕಾಯಕ ಶರಣರ ಧ್ಯೇಯವಾಗಿತ್ತು.
ಅಸಮಾನತೆ, ವರ್ಗ ಹಾಗೂ ವರ್ಣ ಸಂಘರ್ಷಗಳನ್ನು ತೊಡೆಯಲು ಶರಣರು ಮಾಡಿದ ಕ್ರಾಂತಿ ಅನನ್ಯವಾದುದು
ಎಂದು ಬಸವಾದಿ ಶರಣ ಶರಣೆಯರ ವಚನಗಳ ಸಾರವನ್ನು ವಿದ್ಯಾರ್ಥಿಗಳಿಗೆ ವೆಂಕಟನಾಯಕ್ ಮನದಟ್ಟು ಮಾಡಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಸ್ತಾಫ ಮಾತನಾಡಿ, ಶರಣರ ಸಂದೇಶಗಳ ಪಾಲನೆಯಿಂದ ಆದರ್ಶ ಸಮಾಜ ಸಾಧ್ಯವಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಭಕ್ತ ಹಾಗೂ ಶಾಲೆಯ ಹಲವು ವಿದ್ಯಾರ್ಥಿಗಳು ಬಸವೇಶ್ವರ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ಮೊದಲಾದ ವಚನಗಳನ್ನು ಗಾಯನ ಮಾಡಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಶಾಲೆಯ ಶಿಕ್ಷಕ ಟಿ.ಎಸ್.ಶಶಿಕುಮಾರ್, ಶಿಕ್ಷಕಿ ಆಶಾ, ಐರಿನ್, ರಮ್ಯಾ, ಪುಷ್ಪಲತಾ, ಮೇರಿ, ಸುನೀತಾ ಮೊದಲಾದವರಿದ್ದರು.
Back to top button
error: Content is protected !!