ಟ್ರೆಂಡಿಂಗ್

ಅಕ್ಟೋಬರ್ 28 ರಂದು ಹಿಂದೂ ಸ್ಮಶಾನ ಹೋರಾಟ ಸಮಿತಿಯಿಂದ ಪ್ರತಿಭಟನೆ

ಸಿದ್ದಾಪುರ, ಅ 22: :-ನೆಲ್ಯಹುದಿಕೇರಿಯ ಬಹುಸಂಖ್ಯಾತ ಹಿಂದುಗಳಿಗೆ ಸ್ಮಶಾನ ಇಲ್ಲದೇ ಇದ್ದು ವ್ಯಾಪ್ತಿಯ ಸ್ಮಶಾನ ಜಾಗವು ಒತ್ತುವರಿಯಾಗಿದ್ದು ಅದನ್ನು ಬಿಡಿಸಿ ಹಿಂದು ರುದ್ರ ಭೂಮಿಯಾಗಿ ಮಾಡಬೇಕೆಂದು ಒತ್ತಾಯಿಸಿ ಅಕ್ಟೋಬರ್ 28 ರಂದು ಹಿಂದೂ ಸ್ಮಶಾನ ಹೋರಾಟ ಸಮಿತಿ ನೇತೃತ್ವದಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ ಮುಂಬಾಗ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹೋರಾಟ ಸಮಿತಿ ಮುಖಂಡ ಪಿ ಆರ್ ಭರತ್ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೆಲ್ಯಹುದಿಕೇರಿ ಗ್ರಾಮದಲ್ಲಿ ಶೇ 50 ರಷ್ಟು ಹಿಂದುಗಳಿದ್ದು ಅದರಲ್ಲಿ ಬಹುತೇಕರು ತುಂಡು ಭೂಮಿಯಲ್ಲಿ ಮನೆ ನಿರ್ಮಿಸಿ ವಾಸವಿರುವವರು ಹಾಗೂ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಹೆಚ್ಚಾಗಿದ್ದಾರೆ ಇನ್ನು ಉಳಿದಂತೆ ಕೇವಲ 5% ಹಿಂದುಗಳು ಮಾತ್ರ ಆರ್ಥಿಕವಾಗಿ ಮುಂದುವರೆದವರಿದ್ದಾರೆ. ವ್ಯಾಪ್ತಿಯಲ್ಲಿ ಹಿಂದುಗಳ ಕುಟುಂಬಗಳಲ್ಲಿ ಮರಣ ಸಂಭವಿಸಿದ್ದರೆ ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದ ಪರಿಸ್ಥಿತಿ ನೆಲ್ಯಹುದಿಕೇರಿಯಲ್ಲಿ ಕಂಡುಬರುತ್ತಿದೆ. ನೆಲ್ಯಹುದಿಕೇರಿಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾವೇರಿ ನದಿ ದಡದಲ್ಲೇ ಮೃತಪಟ್ಟ ಹಿಂದುಗಳ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಪ್ರವಾಹದಿಂದ ನದಿ ತೀರದ ಸ್ಮಶಾನ ಜಾಗದ ದಡ ಕುಸಿದು ಶವಸಂಸ್ಕಾರಕ್ಕೆ ಸ್ಥಳವಿಲ್ಲದಂತಾಗಿದೆ.ಅಲ್ಲದೆ ಕಾವೇರಿ ನದಿ ಪ್ರವಾಹ ಹೆಚ್ಚಾದಲ್ಲಿ ಈಗ ಇರುವ ಸ್ಮಶಾನ ಜಾಗ ಸಂಪೂರ್ಣ ಮುಳುಗಡೆಯಾಗುತ್ತದೆ. ಮಳೆಗಾಲದಲ್ಲಿ ನೆಲ್ಯಹುದಿಕೇರಿ ಗ್ರಾಮದಲ್ಲಿ ಹಿಂದುಗಳ ಕುಟುಂಬಗಳಲ್ಲಿ ಮರಣ ಸಂಭವಿಸದರೆ ಪಕ್ಕದ ಗ್ರಾಮ ಪಂಚಾಯತಿಗೆ ತೆರಳಿ ಅಂತಿಮ ಸಂಸ್ಕಾರ ಮಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮಳೆಗಾಲದಲ್ಲಿ ವ್ಯಾಪ್ತಿಯ ನಾಣು ಎಂಬುವವರ ಮೃತದೇಹವನ್ನು ನೆಲ್ಯಹುದಿಕೇರಿ ಬೆಟ್ಟದಕಾಡು ರಸ್ತೆಯ ಹಿಂದು ಸ್ಮಶಾನದಲ್ಲಿ‌ಅಂತಿಮ‌ಸಂಸ್ಕಾರ ನೆರವೇರಿಸುವ ಸಮಯದಲ್ಲಿ ಗುಂಡಿ‌ಕುಸಿದು ಅವಾಂತರ ಸಂಭವಿಸಿದೆ. ಅಲ್ಲದೆ ನದಿ‌ದಡ ಪ್ರತೀವರ್ಷ ಕುಸಿಯುತ್ತಿದ್ದು ನದಿ ತೀರದ ಸ್ಮಶಾನ ಜಾಗ ತನ್ನ ವಿಸ್ತೀರ್ಣವನ್ನು ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ದಿನದಿಂದ ದಿನಕ್ಕೆ ನದಿ ಪಾಲಗುತ್ತಿದೆ. ಹಲವಾರು ದಶಕಗಳಿಂದ ನೆಲ್ಯಹುದಿಕೇರಿ ಬೆಟ್ಟದಕಾಡು ಸಮೀಪದ ಸ.ನಂ 183 ರಲ್ಲಿ 1.8 ಏಕರೆ ಜಾಗ ಹಿಂದು ಸ್ಮಶಾನ ಎಂದು ದಾಖಲಾಗಿದ್ದು ಇದೀಗ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಹಿಂದುಗಳ ಸ್ಮಶಾನ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿ ಸ್ಮಶಾನಕ್ಕೆ ಅನುಕೂಲ ಮಾಡಿಕೊಡಬೇಕೆಂದು‌ ಒತ್ತಾಯಿಸಿದರು.ಈ ನಿಟ್ಟಿನಲ್ಲಿ ನೆಲ್ಯಹುದಿಕೇರಿ ಗ್ರಾಮದ ಬಹುಸಂಖ್ಯಾತ ಹಿಂದುಗಳು ಒಗ್ಗಟ್ಟಾಗಿ ತಾ 28 ರ ಸೋಮವಾರದಂದು ಬೆಳಗ್ಗೆ 10:30 ಕ್ಕೆ ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ‌ ದೇವಸ್ಥಾನದಿಂದ ಗ್ರಾ.ಪಂ ಕಚೇರಿಯವರೆಗೆ ಜಾತ ನಡೆಸಿ ಪ್ರತಿಭಟನೆ ನಡೆಸಲಾಗುವುದೆಂದರು. ಅಲ್ಲದೆ ಪ್ರತುಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗ ಅಧಿಕಾರಿಗಳು ಭೇಟಿ‌ನೀಡಿ ಸಮಸ್ಯೆ ಬಗೆ ಹರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಭರತ್ ಎಚ್ಚರಿಸಿದರು.
ಗೋಷ್ಠಿಯಲ್ಲಿ ಸ್ಮಶಾನ ಹೋರಾಟ ಸಮಿತಿ ಪ್ರಮುಖರಾದ ಪಿ ಜಿ ಸುರೇಶ್,ಸಂದೀಪ್ ಕುಮಾರ್, ಉದಯ, ಶಿವರಾಮನ್, ಚಂದ್ರನ್ ,ಅಬೀಬ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!