ಸುದ್ದಿಗೋಷ್ಠಿ

ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಅಕ್ರಮ: ಬಿಜೆಪಿ ಮುಖಂಡರು

ಕುಶಾಲನಗರ, ಸೆ 24: ಬುಧವಾರ ನಡೆಯಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಅಕ್ರಮವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಂ.ಎಂ.ಚರಣ್, ನಾಳೆ ನಡೆಯಲಿರುವ ಚುನಾವಣೆ ನಿಯಮಬಾಹಿರವಾಗಿದೆ. ಚುನಾವಣಾಧಿಕಾರಿಯಾದ ತಾಲೂಕು ತಹಸೀಲ್ದಾರ್ ಅವರು ಕುಶಾಲನಗರ ಪುರಸಭೆಯ ಆಡಳಿತಾಧಿಕಾರಿಯಾಗಿ ಈಗಾಗಲೆ ಕಾರ್ಯ ನಿರ್ವಹಿಸಿದ್ದು, ಮತ್ತೆ ಪಟ್ಟಣ ಪಂಚಾಯ್ತಿ ಎಂಬ ಲೆಕ್ಕಾಚಾರದಲ್ಲಿ ಚುನಾವಣೆ ನಡೆಸುತ್ತಿರುವ ಬಗ್ಗೆ ಪ್ರಶ್ನೆಗೆ ಸೂಕ್ತವಾದ ಪ್ರತಿಕ್ರಿಯೆ ನೀಡಿಲ್ಲ. ಪುರಸಭೆಗೆಂದು ನಾಮನಿರ್ದೇಶನ ಮಾಡಿದ ಸದಸ್ಯರ ಪೈಕಿ ಇಬ್ಬರಿಗೆ ಮತದಾನದ ಹಕ್ಕು ನೀಡಿರುವುದು ಸರಿಯಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಪುರಸಭಾ ಸದಸ್ಯ ಅಮೃತ್ ರಾಜ್ ಮಾತನಾಡಿ, ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಪುರಸಭೆಗೆ ಚುನಾವಣೆಯಾಗಬೇಕಿದೆ. ಇಲ್ಲಿ ಮತ್ತೆ ಪಟ್ಟಣ ಪಂಚಾಯ್ತಿ ಎಂದು ಚುನಾವಣೆ ನಡೆಸಲಾಗುತ್ತಿದೆ. ಪುರಸಭೆಗೆ ನಾಮನಿರ್ದೇಶಿತರಾದ ಇಬ್ಬರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಆ ಇಬ್ಬರು ಸದಸ್ಯರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ಗೊಂದಲದ ವಾತಾವರಣ ಸೃಷ್ಠಿಸಲಾಗಿದೆ. ಈ ಬಗ್ಗೆ ತಹಸೀಲ್ದಾರ್ ಯಾವುದೇ ಸಮಜಾಯಿಷಿಕೆ ನೀಡಿಲ್ಲ ಎಂದರು.
ಇಬ್ಬರು ನಾಮನಿರ್ದೇಶಿತರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸರಕಾರದಿಂದ ಸೂಚನೆ ಬಂದಿರುವುದಾಗಿ ತಹಸೀಲ್ದಾರ್ ಪತ್ರ ತೋರಿಸುತ್ತಿದ್ದಾರೆ. ಆದರೆ ಅದು ನಕಲಿ ಎಂಬುದು ನಮ್ಮ ಗುಮಾನಿ ಎಂದರು.

ಸೋಮವಾರಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ತಹಸೀಲ್ದಾರ್ ಕಛೇರಿ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ ಸಂದರ್ಭ ಸ್ಥಳಕ್ಕೆ ಬಂದ ವಿಪಕ್ಷ ನಾಯಕ ಆರ್.ಅಶೋಕ್ ಅವರ ಪ್ರಶ್ನೆಗೆ ತಹಸೀಲ್ದಾರ್ ಸಮರ್ಪಕವಾಗಿ ಉತ್ತರ ನೀಡದ ಕಾರಣ ಅವರನ್ನು ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಚುನಾವಣೆ ಪ್ರಕರಣದ ಬಗ್ಗೆ ಉನ್ನತಾಧಿಕಾರಿಗಳೊಂದಿಗೆ ಕೂಡ ಅವರು ಚರ್ಚಿಸಿದ್ದಾರೆ. ಆದರೆ ಎಲ್ಲಾರು ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಕಾರಣ ಈ ಗೊಂದಲ ನಿವಾರಣೆಯಾಗುತ್ತಿಲ್ಲ. ಅಕ್ರಮ ಎಸಗುತ್ತಿರುವ ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅಶೋಕ್ ಅವರ ನಡೆಯನ್ನು ಸಮರ್ಥಿಸಿಕೊಂಡರು.

ಮುಖಂಡ ಕೆ.ಜಿ.ಮನು ಮಾತನಾಡಿ, ಸದರಿ ಚುನಾವಣೆ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ. ಚುನಾವಣೆ ಪ್ರಕ್ರಿಯೆ ಸಂಬಂಧ ಸದಸ್ಯರಿಗೆ ತಹಸೀಲ್ದಾರ್ ಎರಡು ರೀತಿಯ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದಲೇ ತಹಸೀಲ್ದಾರ್ ಕಾಂಗ್ರೆಸ್ ಮುಖಂಡರ ಸೂಚನೆಯಂತೆ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿದೆ. ಅಧಿಕಾರದ ದುರ್ಬಳಕೆಯಾಗಿದೆ. ಈ ಬಗ್ಗೆ ಬಹಿರಂಗ ಚರ್ಚೆ ಬರಲು ಕಾಂಗ್ರೆಸಿಗರು ತಿಳಿಸಿದರು.

ಗೋಷ್ಠಿಯಲ್ಲಿ ಸದಸ್ಯ ಜೈವರ್ಧನ್, ಬಿಜೆಪಿ ಪ್ರಮುಖರಾದ ಉಮಾಶಂಕರ್, ಮಧುಸೂದನ್, ಎಂ.ಡಿ.ಕೃಷ್ಣಪ್ಪ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!