ಚುನಾವಣೆ
ಸೋಮವಾರಪೇಟೆ ಪಟ್ಟಣ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ:ಎನ್‌ಡಿಎ ಮೈತ್ರಿಕೂಟ ಗೆಲುವು
ಸೋಮವಾರಪೇಟೆ, ಸೆ 11: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸುವಲ್ಲಿ ಸಂಸದ ಯದುವೀರ್ ಮತ್ತು ಮಾಜಿ ಶಾಸಕ ಅಪ್ಪಚ್ಚು ರಂಜನ್ ಜಾಣ್ಮೆಯ ನಡೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು.
ಜೆಡಿಎಸ್ ನ ಈರ್ವರು ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಯನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿದ್ದರೂ,ಮೈತ್ರಿ ಧರ್ಮ ಪರಿಪಾಲನೆಯಿಂದ ಇದು ಅಸಾಧ್ಯವಾಯಿತು.ಇನ್ನು ಕೇವಲ ಒಂಭತ್ತು ತಿಂಗಳ ಅವಧಿ ಇರುವುದರಿಂದ ಕಾಂಗ್ರೆಸ್ ಕೂಡ ತೀರಾ ಉತ್ಸಾಹ ತೋರಲಿಲ್ಲ.
ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಜೆಡಿಎಸ್‌ನ ಜಯಂತಿ ಶಿವಕುಮಾರ್ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ಮೋಹಿನಿ ಅವರುಗಳು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಜಯಂತಿ ಶಿವಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಮೋಹಿನಿ ಹೇಮಂತ್ ಅವರುಗಳು ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಚುನಾವಣಾಧಿಕಾರಿಗಳು ಈರ್ವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ನಾಮಪತ್ರ ಸಲ್ಲಿಕೆಯ ಅಂತಿಮ ಕ್ಷಣದವರೆಗೂ ಕುತೂಹಲ ಮೂಡಿತ್ತಾದರೂ ಕಾಂಗ್ರೆಸ್‌ನಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಏಕಪಕ್ಷೀಯ ಚುನಾವಣಾ ಪ್ರಕ್ರಿಯೆ ನಡೆಯಿತು. ಸಂಸದ ಯದುವೀರ್ ಅವರು ಪಟ್ಟಣ ಪಂಚಾಯಿತಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಿದರು.
೧೧ ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ ಕಳೆದ ೨೮.೧೦.೨೦೧೮ರಂದು ಚುನಾವಣೆ ನಡೆದಿತ್ತು. ಈ ಸಂದರ್ಭ ಬಿಜೆಪಿಯಿಂದ ೩, ಕಾಂಗ್ರೆಸ್‌ನಿಂದ ೪, ಜೆಡಿಎಸ್‌ನಿಂದ ೩ ಹಾಗೂ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಪಕ್ಷೇತರ ಸದಸ್ಯರಾಗಿದ್ದ ಶುಭಕರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ನಂತರ ಎರಡು ಸ್ಥಾನಕ್ಕೆ ಮರುಚುನಾವಣೆ ನಡೆದು, ಹೆಚ್ಚುವರಿಯಾಗಿ ಬಿಜೆಪಿ ಒಂದು ಸ್ಥಾನ ಪಡೆಯಿತು.
ಈ ಹಿನ್ನೆಲೆ ಬಿಜೆಪಿಯ ಸಂಖ್ಯೆ ೫ಕ್ಕೆ ಏರಿಕೆಯಾಗಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ನಾಗರತ್ನ ಹಾಗೂ ಜೀವನ್ ಅವರುಗಳು ಅಧಿಕೃತವಾಗಿ ಬಿಜೆಪಿ ಸೇರಿದ್ದು, ಮೈತ್ರಿ ಧರ್ಮದಿಂದಾಗಿ ಜೆಡಿಎಸ್‌ನಲ್ಲಿರುವ ಜಯಂತಿ ಅವರ ಮತವೂ ಸೇರಿದಂತೆ ಎನ್‌ಡಿಎ ೮ ಸದಸ್ಯ ಬಲ ಹೊಂದಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶೀಲಾ ಡಿಸೋಜ ಸ್ಪರ್ಧಿಸಲು ಅರ್ಹರಾಗಿದ್ದರೂ ಸಹ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ.
ಪಟ್ಟಣ ಪಂಚಾಯಿತಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಮುಂಭಾಗ ಜಮಾಯಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸಂಸದ ಯದುವೀರ್, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಎಸ್.ಜಿ. ಮೇದಪ್ಪ, ಪ.ಪಂ. ಸದಸ್ಯರುಗಳಾದ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಬಿ.ಆರ್. ಮೃತ್ಯುಂಜಯ, ಶುಭಕರ್, ಜೀವನ್, ನಾಗರತ್ನ ಸೇರಿದಂತೆ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಜೆಡಿಎಸ್‌ನ ಪ್ರವೀಣ್, ಕೆ.ಪಿ.ರಾಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.