ಕುಶಾಲನಗರ, ಜು 21: ಹನ್ನೆರಡನೇ ಶತಮಾನದಲ್ಲಿ ಇದ್ದಂತಹ ಒಡೆದು ಆಳುವ ನೀತಿಯನ್ನು ಖಂಡಿಸಿ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಶ್ರೇಷ್ಠ ಶರಣ ಹಡಪದ ಅಪ್ಪಣ್ಣ ಎಂದು ವಾಗ್ಮಿ ಹಾಗೂ ವಸತಿ ನಿಲಯದ ಮೇಲ್ವಿಚಾರಕ ಶ್ರೀಕಾಂತ್ ಹೇಳಿದರು.
ಕುಶಾಲನಗರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಸ್ಥಳೀಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೇಲು ಕೀಳು, ಬಡವ – ಬಲ್ಲಿದ ಎಂಬಿತ್ಯಾದಿ ತಾರತಮ್ಯ ಧೋರಣೆಗಳ ವಿರುದ್ಧ ಕಟುವಾದ ಶಬ್ಧಗಳಲ್ಲಿ ಖಂಡಿಸಿದ ಅಪ್ಪಣ್ಣ ಅವರು ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿದ್ದರು.
ಹಡಪದ ಸಮುದಾಯದ ವಿರುದ್ದ ಅಂದು ಬೇರೂರಿದ್ಧ ಕಂದಾಚಾರದ ವಿರುದ್ಧ ಸಮರ ಸಾರಿದ್ದ ಬಸವಣ್ಣ ತಮ್ಮಲ್ಲಿಗೆ ಬರುವ ಎಲ್ಲರೂ ಮೊದಲು ಹಡಪದ ಅಪ್ಪಣ್ಣ ಅವರನ್ನು ಕಂಡು ಮಾತನಾಡಿ ಬರುವಂತಹ ವಾತಾವರಣವನ್ನು ಬಸವಣ್ಣನವರು ನಿರ್ಮಾಣ ಮಾಡಿದ್ದರು. ಶರಣರು ನುಡಿದಂತೆಯೇ ನಡೆದವರು.
ಅವರ ನಂಬಿಕೆ ಹಾಗೂ ಆಚರಣೆಗಳಲ್ಲಿ ಯಾವುದೇ ಅಂತರವಿರಲಿಲ್ಲ. ಬಸವಾದಿ ಶರಣರು ಸತ್ಯ ಶುದ್ಧ ಕಾಯಕಕ್ಕೆ ನೀಡಿದ ಮಹತ್ವದಷ್ಟೇ ದಾಸೋಹಕ್ಕೂ ನೀಡಿದ್ದರು ಎಂದು ಶ್ರೀಕಾಂತ್ ವಿಮರ್ಶಿಸಿದರು.
ಮುಖ್ಯ ಅತಿಥಿ ತೊರೆನೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಟಿ.ಬಿ.ಮಂಜುನಾಥ್ ಮಾತನಾಡಿ, ಶರಣರು ತಮ್ಮ ಬದುಕಿನುದ್ದಕ್ಕೂ ಮೌಲ್ಯಾಧಾರಿತ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜದ ಪರಿವರ್ತನೆಗೆ ಜೀವ ಸವೆಸಿದವರು.
ಅಂತಹ ಶರಣರು ರಚಿಸಿದ ವಚನಗಳ ಸಾರವನ್ನು ಪ್ರತೀ ವಿದ್ಯಾರ್ಥಿಯೂ ಕೂಡ ಅರಿತು ಅದರಂತೆ ನಡೆಯಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕು ಅಧಿಕಾರಿ ಸ್ವಾಮಿ, ಬಸವಣ್ಣ ಸಾರಿ ಹೇಳಿದ ಕಲಬೇಡ ಕೊಲಬೇಡ ಎಂಬ ಸಪ್ತ ಸೂತ್ರವೊಂದನ್ನು ವಿದ್ಯಾರ್ಥಿಗಳು ಹಾಗೂ ಸಮಾಜ ಅರಿತು ಅದರಂತೆ ನಡೆದರೆ ರಾಮರಾಜ್ಯ ನಿರ್ಮಾಣ ವಾಗುತ್ತದೆ ಎಂದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್, ಕಾರ್ಯದರ್ಶಿ ಟಿ.ಬಿ.ಮಂಜುನಾಥ್, ಕುಶಾಲನಗರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎಸ್.ಶಿವಾನಂದ ಇದ್ದರು.
ವಿದ್ಯಾರ್ಥಿನಿಯರಾದ ಸ್ಮಿತಾ ನಿರೂಪಿಸಿದರು.ಲಕ್ಷಿತಾ ಸ್ವಾಗತಿಸಿದರು.ರಕ್ಷಿತಾ ವಂದಿಸಿದರು.
Back to top button
error: Content is protected !!