ಕುಶಾಲನಗರ, ಜು. 21: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಸನ ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಸಹಕಾರ ಸಂಘದ ಸಭಾಂಗಣದಲ್ಲಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಮತ್ತು ಸಾರ್ವಜನಿಕರಿಗೆ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ ಹೇಮಂತ್ ಕುಮಾರ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಂಘದ ವ್ಯಾಪ್ತಿಯ ಸಾವಿರಾರು ರೈತ ಸದಸ್ಯರು ಯಶಸ್ವಿನಿ ಯೋಜನೆಯಲ್ಲಿ ಪಾಲುದಾರರಾಗಿರುತ್ತಾರೆ. ರೈತ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಬಂದ ಸಂದರ್ಭಗಳಲ್ಲಿ ಇದರ ಪ್ರಯೋಜನವಾಗುತ್ತದೆ. ಅದರಂತೆಯೇ ಯಶಸ್ವಿನಿ ಯೋಜನೆಯ ಸದಸ್ಯರ ಕಣ್ಣಿನ ತಪಾಸಣೆಯು ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವುದರಿಂದ ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹದೇವ ಕಣ್ಣಿನ ಬಗ್ಗೆ ಮತ್ತು ಯೋಜನೆಯ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಪಿ. ರಾಜು, ಕೆ.ಜೆ. ಕುಮಾರ್, ಕೆ. ಬಿ. ರಾಮಚಂದ್ರ, ಆರ್. ಕೆ.ನಾಗ್ರೇಂದ್ರ ಬಾಬು, ಕೃಷ್ಣೇಗೌಡ, ಎಸ್.ಆರ್.ಅರುಣ್ ರಾವ್, ಎಸ್. ಎಸ್. ಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ, ಅಮ್ಮ ಆಸ್ಪತ್ರೆಯ ವೈದ್ಯರಾದ ಡಾ.ಪ್ರೀತೂ ಸೇರಿದಂತೆ ನೂರಕ್ಕೂ ಹೆಚ್ಚು ರೈತರು , ಸಾರ್ವಜನಿಕರು ತಪಾಸಣೆಯಲ್ಲಿ ಭಾಗವಹಿಸಿದರು.
Back to top button
error: Content is protected !!