ಟ್ರೆಂಡಿಂಗ್

ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ

ಕುಶಾಲನಗರ,ಮೆ 27:: ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿರುದ್ಧ ಕುಶಾಲನಗರ ತಾಲ್ಲೂಕು ಸಮಾನ ಮನಸ್ಕರ ತಂಡದಿಂದ ಕುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಅವರು ಕಛೇರಿಯಲ್ಲಿ ಸಾರ್ವಜನಿಕರಿಗೆ ಸೂಕ್ತವಾಗಿ ಸ್ಪಂದಿಸದೆ ಅಸಡ್ಡೆಯಿಂದ ವರ್ತಿಸುತ್ತಾರೆ. ಆದ್ದರಿಂದ ಈ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸಲಾಯಿತು.

ಕುಶಾಲನಗರ ಯೂತ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಮಾತನಾಡಿ, ಸಾರ್ವಜನಿಕರೊಡನೆ ದರ್ಪದಿಂದ ವರ್ತಿಸುವ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ವಿನಾಕಾರಣ ತೊಡಕುಂಟು ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳು ಕುಶಾಲನಗರಕ್ಕೆ ಬೇಕಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಸ್ವಾತಿ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಕುಶಾಲನಗರ ಭಾಗದಲ್ಲಿ‌ ಬಹುತೇಕ ಅಧಿಕಾರಿಗಳು ಜನಸ್ನೇಹಿಯಾಗಿದ್ದಾರೆ. ಆದರೆ ಈ ಒಂದು ಅಧಿಕಾರಿ‌ ಮಾತ್ರ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಕನಿಷ್ಠ ಗೌರವವೂ‌ ನೀಡುವುದಿಲ್ಲ. ಆದ್ದರಿಂದ ಇಂತಹ ಅಧಿಕಾರಿ ಕುಶಾಲನಗರಕ್ಕೆ‌ ಬೇಕಾಗಿಲ್ಲ. ಇವರನ್ನು ಬೇರೆಡೆಗೆ ವರ್ಗಾಯಿಸಿ ಎಂದರು.

ದಲಿತ ಸಂಘರ್ಷ ಸಮಿತಿ ಭೀಮಾವಾದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ಪ್ರತಿಭಟನಾಕಾರರ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟುಹಿಡಿದ ಪ್ರತಿಭಟನಾಕಾರರು. ಅನಿರ್ಧಿಷ್ಠಾವದಿ ಹೋರಾಟ ನಡೆಸುವ ಎಚ್ಚರಿಕೆ ಹಿನ್ನಲೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ವಿನಾಯಕ್ ನರ್ವಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ದೂರುಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಿದ್ದಾರೆ. ಇದರ ಬಗ್ಗೆ ಸದಸ್ಯ ಕಾರ್ಯದರ್ಶಿಗೆ ನೋಟೀಸ್ ನೀಡಲಾಗುವುದು. ನಂತರ ಅವರ ಪ್ರತಿಕ್ರಿಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗವುದು. ಕುಡಾ ಕಚೇರಿಯಲ್ಲಿ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

ಎಸಿರವರ ಭರವಸೆಯ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಸಿ.ಜಯಪ್ರಕಾಶ್, ಉಪಾಧ್ಯಕ್ಷ ಇಬ್ರಾಹಿಂ, ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಗದೀಶ್, ಮಹಿಳಾ ಸಮಾಜದ ಅಧ್ಯಕ್ಷೆ ಸೆಲಿನಾ‌ಡಿಕುನ್ನಾ, ಕಾರ್ಯದರ್ಶಿ ಶೈಲಾ ಕುಮಾರಿ, ಕರ್ನಾಟಕ ಕಾವಲು ಪಡೆ ತಾಲ್ಲೂಕು ಅಧ್ಯಕ್ಷೆ ಇಂದಿರಾ, ಹರದೂರು ಗ್ರಾ.ಪಂ ಸದಸ್ಯ ಎಂ.ಎ.ಮುಸ್ತಫ, ಕಾಂಗ್ರೆಸ್ ಮುಖಂಡ ಎಂ.ಇ.ಮುಸ್ತಫ, ಆರ್.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಕೆ.ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಹೋಬಳಿ ಅಧ್ಯಕ್ಷ ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ನಗರಾಧ್ಯಕ್ಷ ಶರಣ್, ಪ್ರಮುಖರಾದ ಪರಮೇಶ್, ನಯಾಜ಼್, ಶಕೀಲ್, ಸಚಿನ್, ಅಸ್ಲಂ, ನಯಾಜ಼್ ಡೀನ್, ಬಾಬು ಹಾಗೂ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!