ತೊರೆನೂರು ಗ್ರಾಮ ಪಂಚಾಯತಿಯ ಗ್ರಾಮ ಸಭೆ ಪಂಚಾಯ್ತಿ ಅಧ್ಯಕ್ಷೆ ಎ.ಜೆ.ರೂಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಆರಂಭದಲ್ಲಿ ಕಳೆದ ಗ್ರಾಮ ಸಭೆಯ ವರದಿಯನ್ನು ತಿಳಿಸುವಂತೆ ಗ್ರಾಮಸ್ಥರಾದ ಶಿವಣ್ಣ, ಟಿ.ಕೆ.ಪಾಂಡುರಂಗ, ಕೃಷ್ಣೇಗೌಡ , ರಾಮಣ್ಣ ಒತ್ತಾಯ ಮಾಡಿದರು.
ಕಳೆದ ಸಾಲಿನ ವರದಿಯ ಪ್ರಕಾರ ಕ್ರಮಬದ್ಧವಾಗಿ ಪತ್ರವ್ಯವಹಾರ ಗಳನ್ನು ಗ್ರಾಮ ಪಂಚಾಯತಿ ಮೂಲಕ ಸಂಬಂಧಿಸಿದ ಇಲಾಖೆಗೆ ಮಾಡಿಲ್ಲ ಎಂದು ಗ್ರಾಮಸ್ಥರ ಅರೋಪ ಮಾಡಿದರು. ಆಯಾ ಇಲಾಖೆಗೆ ಅನುಗುಣವಾಗಿ ಪತ್ರವ್ಯವಹಾರ ಮಾಡಲಾಗಿದೆ. ಅದರ ಮೂಲಕ ಇಲಾಖಾವಾರು ಕಾಮಗಾರಿಗಳನ್ನು ಕೈಗೊಳ್ಳುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷೆ ರೂಪ ತಿಳಿಸಿದರು.
ಅರೆ ಮಲೆನಾಡು ಪ್ರದೇಶವಾಗಿರುವ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಬೆಲೆಬಾಳುವ ನೂರಾರು ಹಸುಗಳನ್ನು ಸಾಕುತ್ತಿದ್ದಾರೆ. ಈಗಾಗಲೇ ಅನೇಕ ಹಸುಗಳ ವಿವಿಧ ರೋಗಗಳಿಂದ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಆದರೆ ಪಶುಪಾಲನೆ ಇಲಾಖೆಯ ಮೂಲಕ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇಲಾಖೆಯ ಸೌಲಭ್ಯಗಳು ಸೇರಿದಂತೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆಯಿಂದಾಗಿ ಚಿಕಿತ್ಸೆ ಇಲ್ಲದೆ ಹಸುಗಳ ಸಾವನ್ನಪುತ್ತಿವೆ ಎಂದು ಗ್ರಾಮಸ್ಥರಾದ ಸಿದ್ದಲಿಂಗಪುರ ಪಿ.ಡಿ. ರವಿ, ಟಿ.ಜೆ.ಶಿವಣ್ಣ, ಗಣೇಶ್, ಕೃಷ್ಣೇ ಗೌಡ, ಕುಮಾರ್, ಟಿ. ಬಿ. ಜಗದೀಶ್, ಪಾಂಡುರಂಗ, ಸೋಮಾಚಾರಿ, ರುದ್ರಪ್ಪ ಸೇರಿದಂತೆ ನೂರಾರು ಗ್ರಾಮಸ್ಥರು ಆರೋಪಿಸಿದರು.
ಮೆಕ್ಕೆ ಜೋಳ ಬೆಳೆ ಸೈನಿಕ ಹುಳುಗಳ ಕಾಟದಿಂದ ಹಾಳಾಗುತ್ತಿದ್ದು ನಿಯಂತ್ರಣ ಕ್ರಮದ ಮಾಹಿತಿಯನ್ನು ಕೃಷಿ ಇಲಾಖೆವರು ನೀಡುವಂತೆ ಸಭೆಯಲ್ಲಿ ಹಾಜರಿದ್ದ ರೈತರು ಮಾಹಿತಿ ಬಯಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅರುಣ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ ಕಾವ್ಯ ಜೋಳ, ಅಡಿಕೆ, ಜೇನು ಕೃಷಿ ಬೇಸಾಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಆಹಾರ ಇಲಾಖೆಯ ವತಿಯಿಂದ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಕಾಡುವುದರಿಂದ ದಿನಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವಂತೆ ಕೆ.ಎಸ್. ಕೃಷ್ಣೇಗೌಡ ,ಚಂದ್ರಶೇಖರ್, ಪ್ರೇಮ್ ಕುಮಾರ್, ಚಂದ್ರು ಒತ್ತಾಯ ಮಾಡಿದರು.
ಗ್ರಾಮ ಸಭೆಗೆ ಅನೇಕ ಇಲಾಖೆ ಅಧಿಕಾರಿಗಳು ಬಾರದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ವಿಶೇಷ ಗ್ರಾಮ ಸಭೆಯನ್ನು ಕರೆದು ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಕರೆದು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ಕಂದಾಯ ಇಲಾಖೆ, ಶಿಕ್ಷಣ, ಅರೋಗ್ಯ ,ಅರಣ್ಯ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ಒದಗಿಸಿದರು.
ಸಿದ್ದಲಿಂಗಪುರ ಗ್ರಾಮದಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯತಿಯ ಕಸ ವಿಲೇವಾರಿ ಘಟಕ ಆರಂಭ ಮಾಡುವ ಬಗ್ಗೆ ಆಕ್ಷೇಪಣೆ ಇದ್ದರೂ ಕಾಮಗಾರಿ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಗ್ರಾಮ ಸಭೆಯಲ್ಲಿ ಭಾರಿ ಚರ್ಚೆಗಳು ನಡೆದವು.
ಕಾಮಗಾರಿ ವಿರೋಧಿಸಿ ಸಿದ್ದಲಿಂಗಪುರ ಗ್ರಾಮಸ್ಥರೊಂದಿಗೆ ಸೇರಿ ಗ್ರಾಮ ಹಿತರಕ್ಷಣಾ ಸಮಿತಿಯೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಸಿದ್ದಲಿಂಗಪುರ ಪಿ.ಡಿ.ರವಿ ಬೋಸಣ್ಣ, ಲೋಕೇಶ್ ಪಾಂಡುರಂಗ, ಸೀತಮ್ಮ ಸಭೆಯಲ್ಲಿ ಎಚ್ಚರಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಟಿ.ಬೀಬಿ, ಸದಸ್ಯರಾದ ನಿಂಗಾಜಮ್ಮ ಟಿ.ಸಿ. ಶಿವ ಕುಮಾರ್, ಸಾವಿತ್ರಿ, ತೀರ್ಥಾನಂದ, ಯಶೋಧ, ಕೆ.ಬಿ.ದೇವರಾಜ್ ಮಹಾದೇವ, ಜಿ.ಟಿ.ಶೋಭ ಹಾಜರಿದ್ದರು.
ಅಭಿವೃದ್ಧಿ ಅಧಿಕಾರಿ ವೀಣಾ ವಾರ್ಷಿಕ ವರದಿಯನ್ನು ವಾಚಿಸಿದರು.
Back to top button
error: Content is protected !!