ಪರಿಸರ

ಬತ್ತಿದ‌ ಕಾವೇರಿ, ನಿಸರ್ಗಧಾಮದಲ್ಲಿ ಜಲಚರಗಳ ರಕ್ಷಣಾ ಕಾರ್ಯ

ಕುಶಾಲನಗರ, ಏ 18 : ಬಿಸಿಲಿನ ತಾಪಮಾನಕ್ಕೆ ಕಾವೇರಿಯ ಒಡಲು ಬತ್ತಿ ಹೋದ ಹಿನ್ನಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆ ಮೂಲಕ ಕುಶಾಲನಗರದ ಕಾವೇರಿ ನಿಸರ್ಗಧಾಮದ ಸೇತುವೆಯ ಕೆಳ ಭಾಗದ ನದಿಯಲ್ಲಿ ಅಳಿವಿನಂಚಿನಲ್ಲಿರುವ ಜಲಚರಗಳ ರಕ್ಷಣೆ ಕಾರ್ಯಾಚರಣೆ ನಡೆಸಲಾಯಿತು.

ಅಳಿವಿನಂಚಿನಲ್ಲಿರುವ ಅಪರೂಪದ ತಳಿ ಸರ್ಕಾರದ ರಕ್ಷಣೆಯಲ್ಲಿರುವ ಮಹಶೀರ್ ಮೀನು ಹಾಗೂ ರಾಜ್ಯದ ಮೀನು ಎಂದು ಕರೆಯಲ್ಪಡುವ ಗೆಂಡೆಮೀನ್ , ಸಣ್ಣ ಜಾತಿಯ ಮೀನುಗಳು ಸೇರಿದಂತೆ ಹಲವು ಮೀನುಗಳನ್ನು ರಕ್ಷಿಸಿ ಹಾರಂಗಿ ಜಲಾಶಯದ ಮುಂಭಾಗದಲ್ಲಿ ಇರುವ ನದಿಗೆ ಬಿಡಲಾಯಿತು.

ಈ ಸಂದರ್ಭ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚ್ಚಿನ್ ಮಾತನಾಡಿ, ಬಿಸಿಲಿನ ತಾಪಮಾನಕ್ಕೆ ಕಾವೇರಿ ನದಿಯಲ್ಲಿ ನೀರು ಕ್ಷೀಣಿಸುತ್ತಿದೆ. ಈ ಹಿನ್ನಲೆ ಅಳಿವಿನಂಚಿನಲ್ಲಿರುವ ಮೀನುಗಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಹಶೀರ್, ಗೆಂಡೆಮೀನು ಸೇರಿದಂತೆ ಹಲವು ಜಾತಿಯ ಮೀನುಗಳನ್ನು ರಕ್ಷಿಸಲಾಗಿದೆ ಎಂದರು.
ಮೀನುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಚರಣ್, ಅರಣ್ಯ ವೀಕ್ಷಕ ರಾಕೇಶ್, ಅರಣ್ಯ ರಕ್ಷಕ ಹನುಮಂತ ರಾಯಪ್ಪ ಸೇರಿದಂತೆ ಮೀನುಗಾರಿಕೆ ಇಲಾಖೆಯ ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!