ಟ್ರೆಂಡಿಂಗ್

ಕೂಡ್ಲೂರಿನಲ್ಲಿ ರಾಜ್ಯಮಟ್ಟದ ಹೈಟೆಕ್ ಮಾದರಿ ತರಬೇತಿ ಕಾರ್ಯಗಾರ

ಕುಶಾಲನಗರ, ಫೆ 17: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ನಿರ್ದೇಶಕರುಗಳಿಗೆ ರಾಜ್ಯ ಮಟ್ಟದ ಹೈಟೆಕ್ ಮಾದರಿ ತರಬೇತಿ ಕಾರ್ಯಗಾರ ಕೂಡ್ಲೂರು ಗ್ರಾಮದ ಖಾಸಗಿ ರೆಸಾರ್ಟ್ ನ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಸಹಕಾರ ಮಹಾಮಂಡಳದ ಕಾರ್ಯದರ್ಶಿ ಲಕ್ಷ್ಮಿ ಪತಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಚಳುವಳಿಯ ಅಭಿವೃದ್ಧಿಗೆ ಪೂರಕವಾದ ಸಹಕಾರ ಶಿಕ್ಷಣ, ತರಬೇತಿ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ ಬಂದಿದೆ. ರಾಜ್ಯದ ಸಹಕಾರ ಚಳುವಳಿ ಬೃಹದಾಕಾರವಾಗಿ ಬೆಳೆದು ರಾಜ್ಯದ ಆರ್ಥಿಕ ಪಗ್ರತಿಗೆ ತನ್ನ ಕೊಡುಗೆಯನ್ನು ನೀಡುವುದರ ಮೂಲಕ ಮಹತ್ತರ ಸೇವೆ ಸಲ್ಲಿಸಲು ಸಹಕಾರ ಮಹಾಮಂಡಳವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಮಹಾಮಂಡಳವು ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ 30 ಜಿಲ್ಲಾ ಯೂನಿಯನ್ ಗಳು ಹಾಗೂ 8 ತರಬೇತಿ ಸಂಸ್ಥೆಗಳ ಮೂಲಕ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಗಳಿಗೆ ನಾಯಕತ್ವ ತರಬೇತಿ ಶಿಬಿರ, ಅಲ್ಪಾವಧಿ ತರಬೇತಿ ಶಿಬಿರ, ಸದಸ್ಯರಿಗೆ ಶಿಕ್ಷಣ ತರಬೇತಿ ಸೇರಿದಂತೆ ವಿವಿಧ ತರಬೇತಿಯನ್ನು ನೀಡುವ ಮೂಲಕ ಸಹಕಾರ ಸಂಘಗಳ ಬೆಳವಣಿಗೆಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಮಾತನಾಡಿ, ದೇಶದ ಪ್ರಗತಿಗೆ ಸಹಕಾರ ಸಂಘಗಳ ಪಾತ್ರವು ಬಹುಮುಖ್ಯವಾಗಿರುತ್ತದೆ. ಸಹಕಾರ ವಲಯವು ರಾಷ್ಟ್ರದ ಅರ್ಥ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಇಂತಹ ತರಬೇತಿ ಶಿಬಿರಗಳಿಂದ ರಾಜ್ಯ ಮತ್ತು ಜಿಲ್ಲೆಯ ಸಹಕಾರ ಸಂಘಗಳು ಇನ್ನಷ್ಟು ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಯೂನಿಯನ್ ಬ್ಯಾಂಕ್ ನ ನಿರ್ದೇಶಕ ರವಿ ಬಸಪ್ಪ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಂ. ಎಸ್‌. ಕೃಷ್ಣ ಪ್ರಸಾದ್ , ಜಿಲ್ಲಾ ಯೂನಿಯನ್ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯಕ್ರಮ ಸಂಚಾಲಕ ಯೋಗೇಂದ್ರ ನಾಯಕ್, ಚಾಮರಾಜನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಚಂದ್ರಶೇಖರ್ ಪಾಟೀಲ್, ಸಹಕಾರ ತರಬೇತಿ ಕೇಂದ್ರ ಪ್ರಾಂಶುಪಾಲೆ ಡಾ. ಆರ್. ಎಸ್‌. ರೇಣುಕಾ, ನಬಾರ್ಡ್ ನಿವೃತ್ತ ಅಧಿಕಾರಿ ವೈ .ವಿ. ಗುಂಡುರಾವ್, ಸೋಮವಾರಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಪಾಲ್ಗೊಂಡಿದ್ದರು.
ಮೈಸೂರು ವಿಭಾಗ ಮಟ್ಟದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಮತ್ತು ಪಂಗಡ ದ ಅಧ್ಯಕ್ಷ, ಉಪಾಧ್ಯಕ್ಷ ನಿರ್ದೇಶಕರು ಭಾಗವಹಿಸಿದ್ದರು.
ಕಾರ್ಯಗಾರದಲ್ಲಿ ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ ಕುರಿತು ಮಡಿಕೇರಿಯ ಸಹಕಾರ ತರಬೇತಿ ಕೇಂದ್ರ ಪ್ರಾಂಶುಪಾಲೆ ಡಾ. ಆರ್. ಎಸ್‌. ರೇಣುಕಾ, ಒತ್ತಡ ನಿರ್ವಹಣೆ ಮತ್ತು ಸಮಯ ನಿರ್ವಹಣೆ ಕುರಿತ ಮಾಹಿತಿಯನ್ನು ವೈ. ವಿ. ಗುಂಡುರಾವ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ಸೋಮವಾರಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಮಾತನಾಡಿದರು.
ಇದೇ ಸಂದರ್ಭ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಜೆ.ಪಿ.ರಾಜು ಅವರನ್ನು ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಹಸ್ತಾಂತರಿಸಲಾಯಿತು.
ಸಂಸ್ಥೆಯ ವ್ಯವಸ್ಥಾಪಕಿ ಆರ್ .ಮಂಜಳಾ ಸ್ವಾಗತಿಸಿ, ಯೋಗೇಂದ್ರ ನಾಯಕ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us