ಕುಶಾಲನಗರ, ಜ 18: ಶ್ರೀ ಕ್ಷೇತ್ರ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರೆಭಾಷಿಕ ಗೌಡ ಜನಾಂಗದವರನ್ನು ನಿಂದಿಸಿದವರ ವಿರುದ್ಧ ಈಗಾಗಲೇ ಹಲವು ಕಡೆ ದೂರು ದಾಖಲಿಸಲಾಗಿದೆ. ಆದರೆ ಇನ್ನೂ ಕೂಡ ಕೆಲವೊಂದು ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಲ್ಲದೇ ಮುಂದಿನ ದಿನಗಳಲ್ಲಿ ಗೌಡ ಜನಾಂಗದ ಅಸ್ತಿತ್ವ, ಇತಿಹಾಸ, ಸಂಸ್ಕೃತಿ, ಕೊಡುಗೆ ಇನ್ನಿತರ ವಿಚಾರಗಳಲ್ಲಿ ಬೇರೆ ಜನಾಂಗದಿಂದ ಅವಹೇಳನ ಮಾತುಗಳು ವ್ಯಕ್ತವಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಲು ಇದೇ ತಾರೀಖು 20ರ ಸೋಮವಾರದಂದು ಜನಾಂಗ ಬಾಂಧವರಿಂದ ಯಾವುದೇ ಘೋಷಣೆಗಳಿಲ್ಲದೆ ಶಾಂತಿಯುತವಾಗಿ ಬ್ಯಾನರ್ ಗಳನ್ನು ಹಿಡಿದು ಗೌಡ ಯುವಕ ಸಂಘ, ಕುಶಾಲನಗರ, ಕೊಡಗು ಗೌಡ ಯುವ ವೇದಿಕೆ, ಮಡಿಕೇರಿ, ಕೊಡಗು ಗೌಡ ಮಹಿಳಾ ಒಕ್ಕೂಟ ಮಡಿಕೇರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ಅನೇಕ ವರ್ಷಗಳಿಂದ ಒಗ್ಗಟ್ಟಿನ ಜೀವನ ನಡೆಸುತ್ತಾ ಬಂದಿದ್ದಾರೆ. ಗೌಡ ಹಾಗೂ ಕೊಡವ ಜನಾಂಗಗಳ ನಡುವೆ ವಾಣಿಜ್ಯ ವ್ಯವಹಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಕೌಟುಂಬಿಕ ನೆಲೆಯಲ್ಲಿ ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ. ಆದರೆ ಒಂದು ಊರಿನ ದೇವಾಲಯದಲ್ಲಿ ನಡೆದ ಭಿನ್ನಾಭಿಪ್ರಾಯಗಳನ್ನು ಆ ಊರಿನ ಎಲ್ಲಾ ಜನಾಂಗದವರು ಸೇರಿ ಒಮ್ಮತಕ್ಕೆ ಬಂದು ಪರಿಹರಿಸಿಕೊಳ್ಳುವ ಅವಕಾಶಗಳು ಇದ್ದವು. ಆದರೆ, ಇಂತಹ ಸನ್ನಿವೇಶಗಳ ಲಾಭ ಪಡೆಯಲೆಂದೇ ಸಂಘರ್ಷಗಳನ್ನು ಹುಟ್ಟುಹಾಕುವ ಸಿ ಎನ್ ಸಿ ನಾಚಪ್ಪ ಮತ್ತು ಅವರ ಅನುಯಾಯಿಗಳು ಕೊಡಗಿನಲ್ಲಿ ದ್ವೇಷಪೂರಿತ ವಾತಾವರಣ ಏರ್ಪಡಲು ಕಾರಣರಾಗಿದ್ದಾರೆ. ವಿನಾಕಾರಣ ಗೌಡ ಜನಾಂಗದವರನ್ನು ಇದರಲ್ಲಿ ಬಲಿಪಶು ಮಾಡಿ ಕೊಡಗು ಮತ್ತು ಕೊಡಗಿನ ಹೊರಗೆ ನಮ್ಮ ಜನಾಂಗದ ಬಗ್ಗೆ ನಕಾರಾತ್ಮಕ ಭಾವನೆ ಬರುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಲು ಯತ್ನಿಸಿದ್ದಾರೆ. ಒಕ್ಕಲಿಗ ಜನಾಂಗಕ್ಕೂ ಅರೆಭಾಷಿಕ ಗೌಡರಿಗೂ ಯಾವುದೇ ಸಂಬಂಧ ಇಲ್ಲವೆಂದು ನಿರೂಪಿಸಲು ಕಟ್ಟುಕತೆಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಮಾಧ್ಯಮಗೋಷ್ಠಿಗಳಲ್ಲಿ ಹೇಳುತ್ತಿದ್ದಾರೆ. ಐತಿಹಾಸಿಕ ದಾಖಲೆಗಳು ಇದ್ದಾಗ್ಯೂ ರಾಜಪರಂಪರೆಯ ನಮ್ಮ ಜನಾಂಗವನ್ನು ವಲಸೆ ಬಂದವರೆಂದು, ಸಂಸ್ಕೃತಿಯನ್ನು ಕದ್ದವರೆಂದು ವಿಕೃತ ಶಬ್ದಗಳನ್ನು ಬಳಸಿ ತಮ್ಮ ಅಸಂಸ್ಕೃತ ವ್ಯಕ್ತಿತ್ವದ ಮೂಲಕ ನಮ್ಮ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ನಮ್ಮ ಸಹನೆಗೂ ಒಂದು ಮಿತಿ ಇದೆ. ಗಂಗರಸರಿಂದ ಹಿಡಿದು ಅಮರಸುಳ್ಯದ ವೀರರು ನಂತರದ ಹಿರಿಯ ನೇತಾರರ ಘನತೆ, ಗೌರವ ಮತ್ತು ಕಿಚ್ಚು ಈ ಪೀಳಿಗೆಯಲ್ಲೂ ಮುಂದುವರಿದಿದೆ ಎನ್ನುವುದನ್ನು ನಿರೂಪಿಸುವ ಸಮಯ ಬಂದಿದೆ.
ನಮ್ಮಲ್ಲಿರುವ ಗತ್ತು ಕೇವಲ ಉಡುಪಿನಿಂದ ಬಂದದ್ದಲ್ಲ. ಅದು ನಮ್ಮ ಅನುವಂಶೀಯತೆ ಮತ್ತು ಸುಸಂಸ್ಕೃತಿಯಿಂದ ಬಂದ ಗತ್ತು. ಹಲವು ಪ್ರದೇಶಗಳಲ್ಲಿ ನೆಲೆನಿಂತ ಒಕ್ಕಲಿಗರು ಇತರ ಸಮುದಾಯಗಳಿಂದ ಭಿನ್ನರಾಗಿ ನಿಲ್ಲದೆ, ಒಂದಾಗಿ ಬೆರೆಯುವ ಗತ್ತು.
ನಮ್ಮ ಅಸ್ಮಿತೆಗೆ ಧಕ್ಕೆ ಬರುತ್ತಿರುವ ಈ ಸಮಯದಲ್ಲಿ ನಾವು ಒಂದಾಗಿ ದನಿ ಎತ್ತದೇ ಇದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು.
ಹಾಗಾಗಿ ಜನಾಂಗ ಬಾಂಧವರು ತಮ್ಮ ಯಾವುದೇ ತುರ್ತು ಕೆಲಸಗಳು ಇದ್ದರೂ ಬದಿಗಿರಿಸಿ, ಜನಾಂಗದ ಹಿತದೃಷ್ಟಿಯಿಂದ ಮಡಿಕೇರಿಯಲ್ಲಿ ಇದೇ ಸೋಮವಾರ 20/01/2025 ರ ಬೆಳಿಗ್ಗೆ 10.30 ಘಂಟೆಗೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಯ ಬಳಿ ಸೇರಿ, ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು.
ನಮ್ಮ ಪ್ರತಿಭಟನೆ ಯಾವುದೇ ಸಮುದಾಯದ ವಿರುದ್ಧವಲ್ಲ, ಇದು ಕೇವಲ ನಮ್ಮ ಜನಾಂಗದವರನ್ನು ನಿಂದಿಸುವುವರಿಗೆ ಕಠಿಣ ಶಿಕ್ಷೆ ಆಗುವವರೆಗೆ, ಈ ಪ್ರತಿಭಟನೆಗೆ ಕೊಡಗು ಗೌಡ ಸಮುದಾಯಗಳ ಒಕ್ಕೂಟ ಸೇರಿದಂತೆ, ಕೊಡಗಿನ ಮೈಸೂರಿನ ಬೆಂಗಳೂರಿನ ಎಲ್ಲಾ ಗೌಡ ಸಮಾಜಗಳು ಸಂಘಟನೆಗಳು ಗೌಡ ಯುವ ವೇದಿಕೆ ಮಹಿಳಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಯುವಕ ಸಂಘದ ಕಾರ್ಯದರ್ಶಿ ರೋಹಿತ್, ಖಜಾಂಚಿ ಪಳಂಗೋಟು ವಿನಯ್ ಕಾರ್ಯಪ್ಪ ನಿರ್ದೇಶಕ ಆನಂದ್ ಕರಂದ್ಲಾಜೆ, ಡಾ.ಪ್ರವೀಣ್ ದೇವರಗುಂಡ ಇದ್ದರು.
Back to top button
error: Content is protected !!