ಕುಶಾಲನಗರ, ಜ 28: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ನಡೆಯಿತು.
ಕುಶಾಲನಗರದ ಮಹಿಳಾ ಸಮಾಜ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಎಸ್.ಟಿ.ಎ.ಕೊಡಗು ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, 1999-2000 ಇಸವಿಯಲ್ಲಿ ಉಲ್ಲಾಳದಲ್ಲಿ ಬೆರಳೆಣಿಕೆ ಸದಸ್ಯರಿಂದ ಆರಂಭವಾದ ಸಂಘಟನೆ ಇಂದು ರಾಜ್ಯಾದ್ಯಂತ ವಿಸ್ತರಿಸಿದೆ. ಸಂಘಟನೆ ರಜತಮಹೋತ್ಸವ ಆಚರಣೆ ಸಿದ್ದವಾಗಿದ್ದರೂ ಕೂಡ ಇದುವರೆಗೆ ನಮ್ಮ ಬೇಡಿಕೆಗಳನ್ನು ಯಾವುದೇ ಸರಕಾರ ಈಡೇರಿಸಿಲ್ಲ.
ಆನ್ಲೈನ್ ವಹಿವಾಟುಗಳ ಕಾರಣದಿಂದ ಟೈಲರ್ ಗಳಿಗೆ ಬೇಡಿಕೆ ಕ್ಷೀಣಿಸುತ್ತಿದೆ.
ಸಂಘಟಿತರಾಗುವ ಮೂಲಕ ಟೈಲರ್ಸ್ ಬಾಂಧವರು ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕಿದೆ. ಟೈಲರ್ ಗಳ ಭವಿಷ್ಯ ಸುಭದ್ರವಾಗಿರಬೇಕಾದಲ್ಲಿ ನಮ್ಮ ಬೇಡಿಕೆಗಳು ಈಡೇರಬೇಕಿದೆ.
ಸಂಘಟನೆಗೆ 25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶನ ತೋರಿ ಸರಕಾರದ ಗಮನ ಸೆಳೆಯಬೇಕಿದೆ ಎಂದರು.
ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ನಂದೀಶ್ ಮಾತನಾಡಿ, ಗಣ್ಯ ವ್ಯಕ್ತಿಗಳ ವ್ಯಕ್ತಿತ್ವ ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಉಡುಪುಗಳನ್ನು ತಯಾರಿಸಿ ಕೊಡುವ ಟೈಲರ್ ಬಾಂಧವರು ಸ್ಥಿತಿಗತಿ ಉತ್ತಮವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ನಮ್ಮಲ್ಲಿ ಕೂಡ ಪೈಪೋಟಿ ಹೆಚ್ಚಾಗುತ್ತಿದೆ. ಟೈಲರಿಂಗ್ ಕ್ಷೇತ್ರದಲ್ಲಿನ ಸಮಸ್ಯೆಗಳ ಕಾರಣದಿಂದ
ತಮ್ಮ ಮುಂದಿನ ಪೀಳಿಗೆಗೆ ಟೈಲರ್ ವೃತ್ತಿ ಹೊರತುಪಡಿಸಿ ಇತರೆ ಕ್ಷೇತ್ರಗಳನ್ನು ಅಯ್ದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದು ಯುವ ಸಮೂಹ ಕೂಡ ಇದರಿಂದ ದೂರವಾಗುತ್ತಿದ್ದಾರೆ ಎಂದರು.
ಕುಶಾಲನಗರ ವಲಯ ಸಮಿತಿ ಅಧ್ಯಕ್ಷೆ
ಭವಾನಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಟನೆಗಳು, ಅದರಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಎಲ್ಲರೂ ಅರಿತುಕೊಳ್ಳುವ ಅಗತ್ಯವಿದೆ. ಟೈಲರ್ ಗಳಿಗೂ ಇತರೆ ಕ್ಷೇತ್ರದಂತೆ ಗೌರವ, ಮಾನ್ಯತೆ ಇದೆ ಎಂಬುದನ್ನು ಕೆ.ಎಸ್.ಟಿ.ಎ ತೋರಿಸಿಕೊಟ್ಟಿದೆ. ಆದ್ದರಿಂದ ಟೈಲರ್ ವೃತ್ತಿಯಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಲು ಮುಂದೆ ಬರಬೇಕಿದೆ ಎಂದರು.
ಕೆ.ಎಸ್.ಟಿ.ಎ.ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕುಶಾಲನಗರ ವಲಯ ಸಮಿತಿ ಗೌರವಾಧ್ಯಕ್ಷ ಕೆ.ಎಂ.ವಿಜಯ ಮಾತನಾಡಿದರು.
ಸಭೆಯ ಆರಂಭದಲ್ಲಿ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅಸೋಸಿಯೇಷನ್ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಅಸೋಸಿಯೇಷನ್ ಪದಾಧಿಕಾರಿಗಳು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು
ಈ ಸಂದರ್ಭ ಮಾತನಾಡಿದ ಶಾಸಕ ಮಂಥರ್ ಗೌಡ, ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಭರವಸೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂಧ್ಯಾ ಕಾವೇರಪ್ಪ ವಾರ್ಷಿಕ ವರದಿ ವಾಚಿಸಿದರು. ಸದಸ್ಯೆ
ಸಪ್ನಾ ಲೆಕ್ಕಪತ್ರ ಮಂಡಿಸಿದರು.
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವೃತ್ತಿ ಬಾಂಧವರು ಸಂಘಟನೆ ಪ್ರಮುಖರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ತೋಡಿಕೊಂಡರು.
ಈ ಸಂದರ್ಭ
ಸೋಮವಾರಪೇಟೆ ಸಮಿತಿ ಗೌರವಾಧ್ಯಕ್ಷ
ಮಂಜುನಾಥ್ ಬಿ.ಎನ್, ಮಡಿಕೇರಿ ಸಮಿತಿ ಅಧ್ಯಕ್ಷ ಸಂಜೀವ, ಗೋಣಿಕೊಪ್ಪ ಸಮಿತಿ ಅಧ್ಯಕ್ಷೆ ಅಬಿಬುನಿಸಾ, ಭಾಗಮಂಡಲ ಸಮಿತಿ ಅಧ್ಯಕ್ಷ ನಾಗೇಂದ್ರ, ಮಡಿಕೇರಿ ಸಮಿತಿ ಅಧ್ಯಕ್ಷೆ ಜುಲೆಕಾಬಿ, ಮೂರ್ನಾಡು ಸಮಿತಿ ಅಧ್ಯಕ್ಷೆ ತುಳಸಿ, ಕುಶಾಲನಗರ ಸಮಿತಿ ಉಪಾಧ್ಯಕ್ಷ ನಾಗರಾಜು, ಖಜಾಂಚಿ
ಫೈರೋಜ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಶಾರದಾ, ಜಯಂತ್, ಸಲಹೆಗಾರರಾದ ರೊನಾಲ್, ನಿಸಾರ್ ಅಹಮದ್ ಸೇರಿದಂತೆ ಸದಸ್ಯರು ಇದ್ದರು.
Back to top button
error: Content is protected !!