ಕುಶಾಲನಗರ, ಜ 23: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ ಸಂಪರ್ಕ ಸಭೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರ ಸಮಸ್ಯೆಗಳನ್ನು ಅಲಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಹಾಜರಿದ್ದ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನೂರಾರು ನಿವೇಶನ ರಹಿತರು ನಿವೇಶನ ಒದಗಿಸಲು ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಯಲ್ಲಿ ಈಗಾಗಲೇ ವಸತಿ ರಹಿತ ಫಲಾನುಭವಿಗಳಿಗೆ ಆಯ್ಕೆ, ಮತ್ತು ಕಾಯ್ದಿರಿಸಲಾಗಿರುವ ಜಾಗದ ಬಗ್ಗೆ ಮಾಹಿತಿ ಪಡೆದ ಶಾಸಕರು , ಈಗಾಗಲೇ ಗುರುತಿಸಿರುವ ಮಾಡಿರುವ ಜಾಗದ ಸಮರ್ಪಕ ನಕ್ಷೆಯನ್ನು ತಯಾರಿಸಿ, ಗ್ರಾಮ ಪಂಚಾಯತಿ ಹಸ್ತಾಂತರಿಸುವಂತೆ ಕುಶಾಲನಗರ ತಹಶೀಲ್ದಾರ್ ಗೆ ಸೂಚನೆ ನೀಡಿದರು.
ಮಲ್ಲೇನಹಳ್ಳಿ, ಸೀಗೆಹೊಸೂರು ಬ್ಯಾಡಗೊಟ್ಟ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಲಾಗಿದೆ. ಆದರೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆಗೆ ನೀಡಿದರೂ ಬಿಡುಗಡೆಯಾದ ಹಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ದೊರಕುತ್ತಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ಅರೋಪಿಸಿದರು.
ಬ್ಯಾಡಗೊಟ್ಟ ದಿಡ್ಡಳಿ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ 355 ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು, ಹಕ್ಕು ಪತ್ರ, ಶೌಚಾಲಯ ಸಮಸ್ಯೆಗಳ ಬಗ್ಗೆ ಪುನರ್ವಸತಿ ಕೇಂದ್ರದ ನಿವಾಸಿಗಳು ಶಾಸಕರ ಗಮನ ಸೆಳೆದರು. ಈ ಬಗ್ಗೆ ಸ್ಧಳ ಪರಿಶೀಲನೆ ನಡೆಸಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಶಾಸಕರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಕಳೆದ 10 ದಿನಗಳ ಹಿಂದೆ ಕಂದಾಯ ಇಲಾಖೆಯ ವತಿಯಿಂದ ನಡೆದ ಸರ್ವೆ ನಂಬರ್ 1/1 ರ ಜಾಗದ ನಕ್ಷೆಯನ್ನು ಕಂದಾಯ ಇಲಾಖೆಯ ವತಿಯಿಂದ ಇನ್ನೂ ನೀಡಿಲ್ಲ, ಜಲ ಜೀವನ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ ಕುಡಿಯುವ ನೀರು ದೊರಕದ ಬಗ್ಗೆ , ಒಳಚರಂಡಿ ವ್ಯವಸ್ಥೆ, ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಪಡಿತರ ಚೀಟಿ, ಕೂಡಿಗೆ ಸಂಗಮ ದಾರಿ, ಚರಂಡಿ ಅವ್ಯವಸ್ಥೆ, ಹುದುಗೂರು ಗೋ ಸದನ ಸೇರಿದಂತೆ ಗ್ರಾಮಸ್ಥರು ತಮ್ಮ ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಶಾಸಕ ಮುಂದೆ ಸಾಲು ಸಾಲಾಗಿ ತೆರೆದಿಟ್ಟರು.
ಈ ಎಲ್ಲಾ ಸಮಸ್ಯೆಗಳನ್ನು ಅಲಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಗ್ರಾಮ ಪಂಚಾಯತಿ ಹಂತದಲ್ಲಿ ನಿರ್ವಹಣೆ ಮಾಡುವಂತಹ ಕಾರ್ಯಗಳನ್ನು ಕ್ರಮಬದ್ದವಾಗಿ ನಿರ್ವಹಿಸುವಂತೆ ಅಭಿವೃದ್ಧಿ ಅಧಿಕಾರಿ ಸೂಚನೆ ನೀಡಲಾಗಿದೆ. ಅಲ್ಲದೆ ವಿವಿಧ ಇಲಾಖೆಯ ಮೂಲಕ ಕೈಗೊಳ್ಳುವ ಕೆಲಸಗಳನ್ನು ಅತಿ ಶೀಘ್ರದಲ್ಲಿ ಕೈಕೊಂಡು, ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್, ಉಪಾಧ್ಯಕ್ಷೆ ಜಯಶ್ರೀ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರಾದ ಟಿ.ಪಿ. ಹಮೀದ್, ಅರುಣ್ ರಾವ್, ಅನಂತ, ಹೆಚ್.ಎಸ್ ರವಿ, ಶಿವಕುಮಾರ್ ,ಮೋಹಿನಿ, ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಅಭಿವೃದ್ಧಿ ಅಧಿಕಾರಿ ಮಂಜಳಾ, ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಚೇತನ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದರಾಜ್ , ಐ. ಟಿ .ಡಿ.ಪಿ. ಅಧಿಕಾರಿ ಹೊನ್ನೇಗೌಡ, ಜಿಲ್ಲಾ ಪಂಚಾಯತಿ ಇಂಜಿನಿಯರ್ ವೀರೇಂದ್ರಕುಮಾರ್, ಸಹಾಯಕ ಇಂಜಿನಿಯರ್ ಕೀರ್ತನ್, ಚೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಇಂಜಿನಿಯರ್ ರಾಣಿ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
Back to top button
error: Content is protected !!