ಕುಶಾಲನಗರ, ಜ 17
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೋದ್ಯಮಿಗಳು – ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಮಡಿಕೇರಿ ಶಾಸಕ ಡಾ.ಮಂತರಗೌಡ ಸಭೆ ನಡೆಸಿ ಕೈಗಾರಿಕೋದ್ಯಮಿಗಳ ಅಹವಾಲು ಆಲಿಸಿದರು.
ಕುಶಾಲನಗರದ ಕೂಡ್ಲೂರಿನಲ್ಲಿ ಕಳೆದ 30 ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶಕ್ಕೆಂದು 250 ಎಕರೆ ಭೂಮಿಯನ್ನು ಮೀಸಲಿಡುವ ಮೂಲಕ ನೂರಾರು ಕೈಗಾರಿಕೆಗಳು ತಲೆ ಎತ್ತುವಂತೆ ಮಾಡಿರುವ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರನ್ನು ಇಡೀ ಜಿಲ್ಲೆ ಮರೆಯುವಂತಿಲ್ಲ ಎಂದು
ಮಡಿಕೇರಿ ಶಾಸಕ ಡಾ.ಮಂತರಗೌಡ ಹೇಳಿದರು.
ಕೂಡ್ಲೂರು ಕೈಗಾರಿಕಾ ಪ್ರದೇಶ 250 ಎಕರೆ ಇದ್ದು, ಈ ಪೈಕಿ 85 ಎಕರೆ ಭೂಮಿ ಕಂದಾಯ ಇಲಾಖೆಯಿಂದ ವರ್ಗಾವಣೆಗೊಂಡಿಲ್ಲ. ಹಾಗಾಗಿ ಆರ್ ಟಿ ಸಿ ಇಲ್ಲದೇ ಕೈಗಾರಿಕೋದ್ಯಮಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ 85 ಎಕರೆ ಜಾಗಕ್ಕೆ ಆರ್ ಟಿ ಸಿ ಸಿಗುವಂತೆ ಮಾಡಿಕೊಡಬೇಕೆಂದು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಬ್ಲಾನ್ ಕಾಫಿ ಮೇನೇಜಿಂಗ್ ಡೈರೆಕ್ಟರ್ ಪ್ರವೀಣ್ ಶಾಸಕರ ಗಮನಕ್ಕೆ ತಂದರು.
ಅಲ್ಲದೇ ಕೈಗಾರಿಕಾ ಪ್ರದೇಶದಲ್ಲಿ 110 ಕ್ಕೂ ಹೆಚ್ಚಿನ ಕಾಫಿ ಸಂಸ್ಕರಣಾ ಘಟಕಗಳಿದ್ದು ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಆದರೆ ಅವರಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಈಗ ಇರುವ ಕುಡಿವ ನೀರಿನ ಯೋಜನೆ 30 ವರ್ಷಗಳ ಹಳೆಯದಾಗಿದ್ದು ಪೈಪ್ ಲೈನ್ ಗಳು ಹಾಳಾಗಿವೆ. ನೀರು ಪೋಲಾಗುತ್ತಿದೆ. ಆದ್ದರಿಂದ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕವಾಗಿ ಹಾರಂಗಿ ಯಿಂದ ಕುಡಿವ ನೀರಿನ ಯೋಜನೆ ರೂಪಿಸಬೇಕು. ಹಾಗೂ ಬಹು ಮುಖ್ಯವಾಗಿ ಕೈಗಾರಿಕಾ ಪ್ರದೇಶದ ಅಭಿವೃದ್ದಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಆಗಲೀ, ಕೈಗಾರಿಕಾ ಇಲಾಖೆಯಿಂದಾಗಲೀ ನೆರವು ಸಿಗುತ್ತಿಲ್ಲ. ಹಾಗಾಗಿ ನಮಗೆ ಯಾವುದಾದರೂ ಒಂದು ಇಲಾಖೆಯಿಂದ ಅನುಕೂಲ ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದರು.
ಅಮೃತ ಕಾಫಿ ಸಂಸ್ಥೆಯ ಎಂಡಿ ಕಣ್ಣನ್ ಮಾತನಾಡಿ, ಇಡೀ ಕೈಗಾರಿಕಾ ಪ್ರದೇಶದ ಮೇಲ್ಭಾಗದ ನೀರು ತಗ್ಗು ಪ್ರದೇಶದಲ್ಲಿರುವ ಕಾವೇರಿ ನದಿಯಂಚಿನ ಅಮೃತ ಕಾಫಿ ಸಂಸ್ಕರಣಾ ಘಟಕದೊಳಗೆ ಹರಿಯುತ್ತಿದೆ. ಇದರಿಂದ ಅನಾನುಕೂಲವಾಗುತ್ತಿದೆ. ಕೂಡಲೇ ಸರಿಪಡಿಸಿ ಎಂದು ಶಾಸಕರಲ್ಲಿ ಹೇಳಿಕೊಂಡರು.
ಮತ್ತೋರ್ವ ಕಾಫಿ ಉದ್ಯಮಿ ಸುದೀಪ್,ಹಾರಂಗಿ ಕುಶಾಲನಗರ ಸಂಪರ್ಕ ರಸ್ತೆ ಮಾಡುವಾಗ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದಂತೆ ಮಾಡಲಾಗಿದೆ. ಈ ಬಗ್ಗೆ ಶಾಸಕರು ಸ್ಥಳ ಪರಿಶೀಲಿಸಬೇಕೆಂದು ಕೋರಿದರು. ಇನ್ನೋರ್ವ ಉದ್ಯಮಿ ಅಬ್ದುಲ್ ಮಜೀದ್, ತಮ್ಮ ಕಾಫಿ ಘಟಕದ ಬಳಿ ಸೂಕ್ತ ಚರಂಡಿ ಇಲ್ಲದೇ ತೊಂದರೆಯಾಗುತ್ತಿದೆ. ಇತ್ತ ಗಮನಹರಿಸಿ ಎಂದರು.
ಮತ್ತೋರ್ವ ಉದ್ಯಮಿ ರಾಜಶೇಖರ್ ಮಾತನಾಡಿ, ಕೈಗಾರಿಕಾ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇಜವಬ್ದಾರಿಯಿಂದಾಗಿ ಕೈಗಾರಿಕಾ ಪ್ರದೇಶ ರಾತ್ರಿ ವೇಳೆ ಕತ್ತಲಲ್ಲಿ ಮುಳುಗುತ್ತಿದೆ. ಕೂಡಲೇ ರಾತ್ರಿ ವಿದ್ಯುತ್ ಬೆಳಕಿನ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ಅಹವಾಲು ಆಲಿಸಿ ಮಾತನಾಡಿದ ಶಾಸಕ ಮಂತರಗೌಡ, ಕೈಗಾರಿಕಾ ಬಡಾವಣೆಯ ಕಾರ್ಮಿಕರಿಗೆ ಹಾರಂಗಿಯಿಂದ ಶಾಶ್ವತವಾದ ಕುಡಿವ ನೀರೊದಗಿಸಲು ಪ್ರತ್ಯೇಕವಾದ ಕ್ರಿಯಾಯೋಜನೆ ರೂಪಿಸಲಾಗುವುದು.
ಕೈಗಾರಿಕಾ ಪ್ರದೇಶದ ವಿಸ್ತರಣೆ ತುರ್ತು ಅಗತ್ಯವಿದ್ದು, ಹೆಬ್ಬಾಲೆ – ತೊರೆನೂರು ಪ್ರದೇಶದಲ್ಲಿ ಕೃಷಿ ಹಾಗೂ ಹಾರಂಗಿ ಅಚ್ಚುಕಟ್ಟು ಭೂಮಿ ಇರುವುದರಿಂದ ಬೇರೆ ಪ್ರದೇಶದಲ್ಲಿ ಸೂಕ್ತ ಭೂಮಿ ಹುಡುಕಲು ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಸ್ಥಳೀಯ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ವಹಿಸುವ ಸಂಬಂಧ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸೂಚಿಸಿದರು.
ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಅನುಕೂಲ ಒದಗಿಸುವ ಸಂಬಂಧ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಅನುದಾನ ತರುವುದಾಗಿ ಇದೇ ಸಂದರ್ಭ ಹೇಳಿದರು.
ಕೈಗಾರಿಕೋದ್ಯಮಿಗಳ ಸಂಘದ ಕಟ್ಟಡಕ್ಕೆ ಪೂರಕವಾದ ಅನುದಾನ ಒದಗಿಸಲಾಗುವುದು ಎಂದು ಇದೇ ಸಂದರ್ಭ ಶಾಸಕ ಮಂತರಗೌಡ ಹೇಳಿದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್, ಪಿಡಿಒ ಸಂತೋಷ್, ಕಾಫಿ ಉದ್ಯಮಿ ಸಾತಪ್ಪನ್, ವಿಶ್ವನಾಥನ್, ಕುಮಾರ್, ದಾಧಿಕ್, ಸುದೀಪ್, ರಾಜಶೇಖರ್, ಭಾವನಾ ಪ್ರವೀಣ್ ಮೊದಲಾದವರಿದ್ದರು.
Back to top button
error: Content is protected !!