ಸಭೆ

7ನೇ ಹೊಸಕೋಟೆ ಗ್ರಾಮಸಭೆ: ಕಾಡಾನೆ ಹಾವಳಿ ತಡೆಗೆ ಗ್ರಾಮಸ್ಥರ ಆಗ್ರಹ

ಕುಶಾಲನಗರ, ಡಿ 19 : ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿ ಇದ್ದು ಕೃಷಿಕರು ಹಾಗೂ ಜನವಸತಿಗೆ ತೊಂದರೆ ಯಾಗುತ್ತಿದ್ದರೂ ಕೂಡ ಅರಣ್ಯ ಇಲಾಖೆ ಕಾಡಾನೆ ಗಳ ಹಾವಳಿ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೊಂಡೂರು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದರು.
ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ತೊಂಡೂರಿನ ನಿವಾಸಿಗಳು, ಅರಣ್ಯಚಿನಲ್ಲಿ ಜನವಸತಿ ಇದೆ. ನಮಗೆ ಸೂಕ್ತ ಬೀದಿ ದೀಪಗಳಿಲ್ಲ. ಅರಣ್ಯ ವ್ಯಾಪ್ತಿಯ ರಸ್ತೆಯ ಬದಿಗಳಲ್ಲಿ ಬೆಳೆದಿರುವ ಕಾಡುಗಿಡಗಳನ್ನು ಕಡಿದು ರಸ್ತೆ ಬದಿಯನ್ನು ಸುಸ್ಥಿತಿಯಲ್ಲಿ ಇಡದ ಕಾರಣ ಕಾಡಾನೆಗಳು ಎದುರು ಬಂದರೂ ಗೋಚರವಾಗಲ್ಲ. ಇದರಿಂದ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷ ಜೋಸೆಫ್ ಕಾಡಾನೆಗಳ ನಿಗ್ರಹಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿ ಸಮಸ್ಯೆ ಬಗೆಹರಿಸಲಾಗುವುದು. ಕೂಡಲೇ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅರಣ್ಯ ದಂಚಿನ ರಸ್ತೆ ಬದಿಯಲ್ಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗುವುದು ಎಂದರು.
ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಹೋಂ ಸ್ಟೇಗಳು, ರೆಸಾರ್ಟ್ ಗಳು ಹಾಗೂ ಪ್ರವಾಸಿ ತಾಣಗಳಿಗೆ ದೂರದಿಂದ ಧಾವಿಸುವ ಪ್ರವಾಸಿಗರು ತಮ್ಮಲ್ಲಿ ಸಂಗ್ರಹಣೆಯಾಗುವ ಮಕ್ಕಳಿಗೆ ಬಳಸುವ ಪ್ಯಾಡ್ ಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಮನಬಂದಂತೆ ಬಿಸಾಕಿ ತೆರಳುತ್ತಿದ್ದಾರೆ. ಜೊತೆಗೆ ಕೆಲವರು ಚೀಲಗಳಲ್ಲಿ ಕಸವನ್ನು ತುಂಬಿಸಿ ತಂದು ಬಿಸಾಕುತ್ತಿದ್ದು ಬೀದಿ ನಾಯಿಗಳು ಚೀಲಗಳನ್ನು ಎಳೆದಾಡಿ ಪರಿಸರ ಮಾಲಿನ್ಯ ಮಾಡುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗ ಬಾಧೆ ಭೀತಿ ಆವರಿಸಿದೆ.
ಇದರಿಂದಾಗಿ ನಮಗೆ ತೊಂದರೆಯಾಗುತ್ತಿದ್ದು ಗ್ರಾಮಗಳು ಕಸದ ತೊಟ್ಟಿಗಳಾಗುತ್ತಿವೆ ಎಂದು
ತೊಂಡೂರು ಗ್ರಾಮದ ಕೆ.ಎನ್.ಸಂತೋಷ್, ರೇಖಾ, ರಶ್ಮಿ ಮೊದಲಾದವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಭೀಕರ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು ಈ ಸಮಸ್ಯೆಯ ಪರಿಹಾರಕ್ಕೆ ಶೀಘ್ರದಲ್ಲೇ ಸೂಕ್ತ ಪರಿಹಾರ ಹುಡುಕುವುದಾಗಿ ಹೇಳಿದರು.
ಏಳನೇ ಹೊಸಕೋಟೆ ಗ್ರಾಮದ ಸರ್ವೆ ನಂಬರ್ 65 ರಲ್ಲಿ ಇದ್ದಂತಹ ಕೆರೆಯ ಜಾಗವನ್ನು ಪಂಚಾಯಿತಿಯ ಹಾಲೀ ಸದಸ್ಯರಾದ ಮುಸ್ತಾಫ ಎಂಬವರು ಅತಿಕ್ರಮಿಸಿದ್ದಾರೆ. ಆದ್ದರಿಂದ ಆ ಕೆರೆಯ ಜಾಗವನ್ನು ಸಂರಕ್ಷಿಸಬೇಕೆಂದು ಕೆಲವು ಗ್ರಾಮಸ್ಥರು ಒತ್ತಾಯಿಸಿದಾಗ ಕೆಲ ಹೊತ್ತು ಸಭೆಯಲ್ಲಿ ಸದಸ್ಯರಾದ ರಮೇಶ್ ಹಾಗೂ ಮುಸ್ತಾಫ ಅವರ ಮಧ್ಯೆ ವಾಕ್ಸಮರವೇ ನಡೆಯಿತು.
ಸದಸ್ಯರ ವರ್ತನೆಯನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಸದಸ್ಯ ಮುಸ್ತಾಫ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಎದುರಾಯಿತು.
ಈ ಮಧ್ಯೆ ಪ್ರವೇಶಿಸಿದ ಪಂಚಾಯಿತಿ ಅಧ್ಯಕ್ಷ ಇ.ಬಿ. ಜೋಸೆಫ್, ಕೆರೆಗಳ ಸಂರಕ್ಷಣೆ ಪಂಚಾಯಿತಿಯ ಜವಬ್ದಾರಿಯಾಗಿದೆ. ಕೆರೆಗಳೂ ಸೇರಿದಂತೆ ಸರ್ಕಾರಿ ಜಾಗಗಳನ್ನು ಕಬಳಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿನ ಒತ್ತುವರಿಯಾಗಿರುವ ಕೆರೆಗಳೂ ಸೇರಿದಂತೆ ಎಲ್ಲಾ ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿದಾರರಿಂದ ತೆರವುಗೊಳಿಸಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದರು.
ಗ್ರಾಮದ ನಿವಾಸಿ ಟೈಲರಿಂಗ್ ವೃತ್ತಿ ಮಾಡುವ ರಶ್ಮಿ ಎಂಬವರು ಮಾತನಾಡಿ, ಗ್ರಾಮಸಭೆಗೆ ಗ್ರಾಮಸ್ಥರು ಬಂದು ಸಲಹೆ ಕೊಡಿ. ದೂರುಗಳಿದ್ದರೆ ಹೇಳಿಕೊಳ್ಳಿ ಬನ್ನಿ ಎಂದು ಕರೆಯುತ್ತೀರಿ.
ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿದ್ದೇವೆ. ಆದರೆ ಸಭೆಯಲ್ಲಿ ಸದಸ್ಯರೇ ದಬ್ಬಾಳಿಕೆಯ ಮಾತುಗಳಾಡಿದರೆ ಹೇಗೆ ?
ಮುಂದಿನ ದಿನಗಳಲ್ಲಿ ಸದಸ್ಯರ ವರ್ತನೆಯಲ್ಲಿ ಬದಲಾವಣೆ ಯಾಗದಿದ್ದರೆ ನಾವುಗಳು ಸಭೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದಾಗ ಸಭಿಕರಿಂದ ಚಪ್ಪಾಳೆಯ ಸಹಮತ ಕೇಳಿ ಬಂತು.
ತೊಂಡೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ದೂರುಗಳ ಸುರಿಮಳೆಗೈದರು.
ರಸ್ತೆ ಕಾಮಗಾರಿಗೆಂದು ಮೀಸಲಿರಿಸಿದ್ದ ಅನುದಾನವನ್ನು ಹಿಂಪಡೆದಿರುವ ಬಗ್ಗೆ ಸದಸ್ಯ ರಮೇಶ್ ಸಭೆಯಲ್ಲಿದ್ದ ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಫಯಾಜ್ ಅವರನ್ನು ಪ್ರಶ್ನಿಸಿದಾಗ, ಅದು ನಮ್ಮ ಇಲಾಖೆಯ ಅನುದಾನವಲ್ಲ. ಯಾವ ಇಲಾಖೆಯ ಅನುದಾನ ಎಂದು ಖಚಿತ ಪಡಿಸಿಕೊಳ್ಳಿ ಎಂದರು.
ತೊಂಡೂರು ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಕ್ಕೆ ತಡೆ ಗೋಡೆ ಇಲ್ಲ. ಹೀಗಾಗಿ ಇಲ್ಲಿನ ಮಕ್ಕಳು ನೇರವಾಗಿ ರಸ್ತೆಗೆ ಓಡಿ ಬರುವ ಅಪಾಯವಿದೆ. ಕೂಡಲೇ ತಡೆಗೋಡೆ ನಿರ್ಮಿಸಿ ಎಂದು ಶ್ರೀಜಾ ಎಂಬವರು ಆಗ್ರಹಿಸಿದರು.
ಅರಣ್ಯ ಭಾಗದಿಂದ ಮಳೆಗಾಲದ ಅವಧಿಯಲ್ಲಿ ತೊಂಡೂರು ಭಾಗದ ಜನ ವಸತಿ ಹಾಗೂ ತೋಟಕ್ಕೆ ನೀರು ಹರಿಯುತ್ತಿದೆ. ಇದನ್ನು ತಪ್ಪಿಸಲು ಅರಣ್ಯದೊಳಗೆ ಕೆರೆಗಳನ್ನು ನಿರ್ಮಿಸಿದಲ್ಲಿ ಕಾಡಾನೆಗಳಿಗೂ ದಾಹ ನೀಗುತ್ತದೆ. ಸಮಸ್ಯೆಯೂ ಬಗೆಹರಿಯುತ್ತದೆ. ತೊಂಡೂರು ಎರಡನೇ ವಾರ್ಡಿನಲ್ಲಿ ಕಸ ವಿಲೇವಾರಿಗೆ ಗುರುತಿಸಿರುವ ಜಾಗದಲ್ಲಿ ಜನವಸತಿ ಹಾಗೂ ಕುಡಿವ ನೀರಿನ ಜಲಮೂಲಗಳಿಗೆ ಧಕ್ಕೆಯಾಗುತ್ತದೆ. ಜೊತೆಗೆ
ಸಾರ್ವಜನಿಕರಿಗೆ ತೊಂದರೆ ಯಾಗುವುದರಿಂದ ಇಲ್ಲಿ ಘಟಕ ತೆರೆಯಲು ಬಿಡುವುದಿಲ್ಲ ಎಂದು ಅಲ್ಲಿನ ಮಹಿಳೆಯರು ವಿರೋಧ ವ್ಯಕ್ತಪಡಿಸಿದರು.
ನೆರೆಯ ಕೇರಳ ರಾಜ್ಯದಲ್ಲಿ ಮಾರಕ ಕೊರೋನಾ ಅಪಾಯ ಸೃಷ್ಟಿಯಾಗುತ್ತಿದೆ. ಹಾಗಾಗಿ ಕೊಡಗಿನಿಂದ ಶಬರಮಲೆಗೆ ಯಾತ್ರೆ ತೆರಳಿ ಮರಳುವವರನ್ನು ತಪಾಸಣೆಗೆ ಒಳಪಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಬೇಕಿದೆ ಎಂದು ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ಸಭೆಯ ನೋಡಲ್ ಅಧಿಕಾರಿಯಾಗಿ ಸೋಮಯ್ಯ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ. ಹಾಗೆಯೇ ಪಂಚಾಯಿತಿಯ ಎಲ್ಲಾ ಸದಸ್ಯರ ಸಹಭಾಗಿತ್ವದಲ್ಲಿ ಸರ್ಕಾರದಿಂದ ದೊರಕುವ ಅನುದಾನಗಳನ್ನು ಬಳಸಿಕೊಂಡು ಆದ್ಯತೆಯ ಮೇಲಿನ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದರು.
ಹಾಗೆಯೇ ಕಾಡಾನೆಗಳ ನಿಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸುವುದಾಗಿ ಅಧ್ಯಕ್ಷ ಜೋಸೆಫ್ ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು.
ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯಶ್ರೀ , ಸಿದ್ದಿಕ್, ಮಧುಸೂದನ್, ಕಮಲ, ಸಿಂಧೂ, ವೇದಾವತಿ, ಚಂದ್ರಾವತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಂದೀಶ ಕುಮಾರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!