ಕುಶಾಲನಗರ ಡಿ 15: ಲೋಕಸಭಾ ಕಲಾಪಕ್ಕೆ ನುಗ್ಗಿ ಕೋಲಾಹಲ ಸೃಷ್ಠಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ದ ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಸಂಸತ್ ಭವನ ಭದ್ರತಾ ವೈಫಲ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸಿಗರು ಬಿಜೆಪಿ ಸರಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು. ತನ್ನ ಬೆಂಬಲಿಗರ ಕಿಡಿಗೇಡಿತನದಿಂದ ಸಂಸತ್ ನಲ್ಲಿ ಭದ್ರತಾ ವೈಫಲಕ್ಕೆ ಕಾರಣರಾದ ಪ್ರತಾಪ್ ಸಿಂಹ ರಾಜೀನಾಮೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಸತ್ ಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಮೋದಿ ಹಾಗೂ ಅಮಿತ್ ಶಾ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.
ಶಶಿಧರ್, ಸಂಸದ ಪ್ರತಾಪ್ ಸಿಂಹಗೆ ಇರುವುದು ನಕಲಿ ದೇಶಪ್ರೇಮವಷ್ಟೇ. ತನ್ನ ಬೆಂಬಲಿಗರ ಕೃತ್ಯದಿಂದ ಆತನ ನಿಜಬಣ್ಣ ಬಯಲಾಗಿದೆ. ಇದೇ ಕೃತ್ಯ ಕಾಂಗ್ರೆಸಿನ ಕಡೆಯಿಂದ ಉಂಟಾಗಿದ್ದಲ್ಲಿ ಎಲ್ಲೆಡೆ ಬೆಂಕಿ ಹಚ್ಚುವ ಕೆಲಸವಾಗುತ್ತಿತ್ತು. ಮೋದಿಯ ಕನಸಿನ ಸಂಸತ್ ನ ಘನತೆಗೆ ಚ್ಯುತಿ ತರುವಂತಹ ಕೃತ್ಯ ಇದಾಗಿದ್ದು ಈ ಬಗ್ಗೆ ಕೊಡಗು ಮೈಸೂರು ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಆಗಂತುಕರಿಗೆ ಪಾಸ್ ನೀಡಿ ಜಗತ್ತಿನ ಮುಂದೆ ಭಾರತ ತಲೆತಗ್ಗಿಸುವಂತಹ ಕೃತ್ಯಕ್ಕೆ ಪರೋಕ್ಷ ಕಾರಣವಾದ ಸಂಸದರನ್ನು ದೂರ ಇಡುವ ಕೆಲಸ ಮಾಡಬೇಕಿದೆ.
ಏನೂ ನಡೆದೇ ಇಲ್ಲದಂತೆ ಸುಮ್ಮನಿರುವ ಬಿಜೆಪಿ ಸರಕಾರ ಪ್ರತಾಪ್ ಸಿಂಹನನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದು ಲಜ್ಜೆಗೇಡಿತನ. ಕ್ಷುಲ್ಲಕ ಕಾರಣಕ್ಕೆ ರಾಹುಲ್ ಗಾಂಧಿ ಸಂಸತ್ ಸ್ಥಾನ ರದ್ದತಿಗೆ ಉತ್ಸಾಹ ತೋರಿದ ಬಿಜೆಪಿ ತಮ್ಮದೇ ಪಕ್ಷದ ಪ್ರತಾಪ್ ಸಿಂಹನ ಸ್ಥಾನ ವಜಾಗೊಳಿಸಬೇಕಿದೆ ಎಂದು ಆಗ್ರಹಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಗ್ಯಾಸ್ ಬಾಂಬ್ ಬದಲು ವಷ ಬಾಂಬ್ ದಾಳಿ ನಡೆದಿದ್ದಲ್ಲಿ ಎಂತಹ ದೊಡ್ಡ ಅನಾಹುತ ಸೃಷ್ಠಿಯಾಗುತ್ತಿತ್ತು ಎಂಬ ಅಂಶ ಎಲ್ಲರೂ ಗಮನಿಸಬೇಕಾಗಿದೆ. ಇಂತಹ ಭದ್ರತಾ ವೈಫಲಕ್ಕೆ ಹೊಣೆಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯರಾದ ಶೇಖ್ ಖಲೀಮುಲ್ಲಾ, ಎಂ.ಕೆ.ದಿನೇಶ್, ಕಾರ್ಮಿಕ ಘಟಕದ ಟಿ.ಪಿ.ಹಮೀದ್, ಶಿವಶಂಕರ್, ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಪ್ರಮುಖರಾದ ರಜಾಕ್, ಫಿಲೋಮಿನಾ, ನವೀನ್, ಜಗದೀಶ್, ರಂಜನ್,ಪ್ರಕಾಶ್, ಆದಂ, ನಾರಾಯಣ್, ಮುಸ್ತಾಫ ಮತ್ತಿತರರು ಇದ್ದರು.
Back to top button
error: Content is protected !!