ಕುಶಾಲನಗರ ನ 29:ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಾಭಿಮಾನದ ಜೊತೆಗೆ ಭಾಷಾಭಿಮಾನವನ್ನು ಮೈಗೂಡಿಸಿಕೊಂಡಾಗ ಮಾತ್ರ ನಾಡು ನುಡಿಯ ರಕ್ಷಣೆ ಸಾಧ್ಯ ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಕಾವಲು ಪಡೆ ವತಿಯಿಂದ ಆಯೋಜಿಸಲಾಗಿದ್ದ 68ನೇ ಕನ್ನಡ ರಾಜ್ಯೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಈ ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ಪ್ರೀತಿಸಿ ಗೌರವಿಸಬೇಕು. ಅದರಲ್ಲೂ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಭಾಗವನ್ನು ಕನ್ನಡದಲ್ಲಿ ಅಧ್ಯಯನ ಮಾಡುವ ಮನಸ್ಸು ಮಾಡಬೇಕು.ಬಾಲ್ಯದಿಂದಲೇ ದೇಶಾಭಿಮಾನದ ಜೊತೆಗೆ ಕನ್ನಡ ನಾಡಿನ ಹೆಮ್ಮೆಯ ಭಾಷೆಯ ಅಭಿಮಾನವನ್ನು ಮೈಗೂಡಿಸಿಕೊಳ್ಳಬೇಕು. ಸ್ವಾಮಿಮಾನದಿಂದ ಬದುಕುವ ಕನ್ನಡಿಗನಿಗೆ ಸಾಮಾಜಿಕವಾಗಿ ಯಾವುದೇ ಸಂಕಷ್ಟ ಬಂದರೂ ಕೂಡ ಅವರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಕನ್ನಡಿಗರ ಏಕತೆಯು ಏನೆಂಬುದನ್ನು ನೆರೆ ರಾಜ್ಯಗಳಿಗೆ ಮನದಟ್ಟು ಮಾಡಿಕೊಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಗುರುಗಳಿಗೆ ವಿನಯವಂತನಾದರೆ ಮಾತ್ರ ಅವನು ಸಮಾಜದಲ್ಲಿ ಉತ್ತಮ ಪ್ರಜೆ ಆಗಿ ರೂಪುಗೊಳ್ಳಲು ಸಾಧ್ಯ ಎಂದು ಇದೇ ಸಂದರ್ಭ ತಿಳಿಸಿದರು.
ಉಪನ್ಯಾಸ ನೀಡಿದ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾನಿಲಯದ ಉಪನ್ಯಾಸಕ ಜಮೀರ್ ಅಹಮದ್, ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವಾಗ ಕನ್ನಡಕ್ಕೆ ಹೆಚ್ಚಿನ ಮಾನ್ಯತೆನಬೇಕು. ಇತ್ತೀಚಿಗೆ ಇಂಗ್ಲಿಷ್ ಅತಿ ಹೆಚ್ಚು ಬಳಕೆಯಾಗುತ್ತಿರುವುದು ದುರಾದೃಷ್ಟಕರ. ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಪಸರಿಸುತ್ತಿದೆ. ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ ವಿಶ್ವ ಭಾಷೆಯಾದ ಕನ್ನಡವು ಜಗತ್ತಿನಲ್ಲೇ ನೂರಕ್ಕೆ ತೊಂಬತ್ತು ಭಾಗ ಪರಿಪೂರ್ಣ ಭಾಷೆಯಾಗಿದೆ. ಇಂತಹ ವಿಚಾರವು ನಾಡಿನ ಪ್ರತಿಯೂಬ್ಬ ಕನ್ನಡಿಗನೂ ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡು ಸಂತಸಪಡುವ ವಿಚಾರವಾಗಿದೆ. ಆದ್ದರಿಂದ ಕನ್ನಡ ಭಾಷೆಯನ್ನು ಜೋಪಾನ ಮಾಡಬೇಕಾಗಿದೆ ಎಂದು ಇದೇ ಸಂದರ್ಭ ತಿಳಿಸಿದರು.
ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಕನ್ನಡ ಗೀತನ್ರೃತ್ಯ ನೆರವೇರಿತು. ನಂತರ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 10 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಸ್.ಸತೀಶ್, ಅಬಕಾರಿ ನಿರೀಕ್ಷಕ ಲೋಕೇಶ್, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಕ.ಸಾ.ಪ. ನಿಕಟಪೂರ್ವ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕ.ಸಾ.ಪ. ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್, ಬಾರವಿ ಕನ್ನಡ ಅಭಿಮಾನಿ ಸಂಘದ ಬಬೀಂದ್ರ ಪ್ರಸಾದ್, ಶಿಕ್ಷಕರಾದ ಮಾಲಾದೇವಿ, ಕರ್ನಾಟಕ ಕಾವಲು ಪಡೆಯ ಪದಾಧಿಕಾರಿಗಳಾದ ತಬಲಾ ವಿಜಯಕುಮಾರ್, ಮಂಜುನಾಥ್, ಇಂದಿರಾ, ಅಭಿಲಾಷ್ ಇನ್ನಿತರರು ಹಾಜರಿದ್ದರು.
Back to top button
error: Content is protected !!